ಬೆಂಗಳೂರು: ಇನ್ಸ್ಟಾಗ್ರಾಮ್‌ನಲ್ಲಿ ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಯುವಕನನ್ನ ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ನಿಲೋಯ್ ಮಂಡಲ್ ಬಂಧಿತ ಆರೋಪಿಯಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ನೇಟಿವ್ ಬೆಂಗಳೂರಿಯನ್ಸ್ ಎಂಬ ಪೇಜ್ ಒಂದರಲ್ಲಿ ಕರ್ನಾಟಕವನ್ನ ಕೆಟ್ಟದಾಗಿ ಅವಹೇಳನ ಮಾಡಿದ್ದಲ್ಲದೇ, ಉತ್ತರ ಭಾರತದವರು ಬೆಂಗಳೂರಿನಿಂದ ಹೊರಟು ಹೋದರೆ ಬೆಂಗಳೂರಿಗರು ಕಾಡು ಜನರಿಗೆ ಸಮವಾಗುತ್ತಾರೆ ಎಂದು ಅತಿರೇಕವಾಗಿ ಪೋಸ್ಟ್ ಮಾಡಿದ್ದ. ಅಲ್ಲದೇ ಕನ್ನಡವನ್ನ ಅತ್ಯಂತ ಕೆಟ್ಟ ಭಾಷೆ ಎಂದು ಅವಹೇಳನ ಮಾಡಿದ್ದ. ಈ ಬಗ್ಗೆ ಅನೇಕ ಕನ್ನಡಪರ ಸಂಘಟನೆಗಳು, ಕಾರ್ಯಕರ್ತರು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ, ಆತ ಕೆಲಸ ಮಾಡುತ್ತಿದ್ದ ಕಂಪನಿ ಹಾಗೂ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯ ಕೀಳು ಅಭಿಪ್ರಾಯದ ವಿರುದ್ಧ ವಿಷಾದ ವ್ಯಕ್ತಪಡಿಸಿದ್ದ ಕಂಪನಿ ಆತನ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿತ್ತು. ಮತ್ತೊಂದೆಡೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಕೊಡಿಗೆಹಳ್ಳಿ ಪೊಲೀಸರು ಆರೋಪಿಯನ್ನ ಬಂಧಿಸಿರುವುದಾಗಿ ತಿಳಿಸಿದ್ದಾರೆ.
![](https://bcsuddi.com/wp-content/uploads/2025/02/WhatsApp-Image-2025-02-05-at-6.18.34-PM.jpeg)