ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕನ್ನಡ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಅಕ್ಷರಗಳಿಗೆ ಜಾಗವಿರಬೇಕೆಂಬುದು ಇದೀಗ ಅಧಿಕೃತವಾಗಿ ಕಾಯ್ದೆಯ ಸ್ವರೂಪವನ್ನು ಪಡೆದುಕೊಂಡಿತು. ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರ ಪರವಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಡಿಸಿದ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ”ಕ್ಕೆ ಸದನದಲ್ಲಿ ಬಹುಮತದ ಅಂಗೀಕಾರ ದೊರೆಯಿತು.
ಜನವರಿ 5 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಕನ್ನಡ ನಾಮಫಲಕಗಳು ಶೇ.60 ರಷ್ಟಿರಬೇಕೆಂದು ನಿರ್ಧರಿಸಲಾಗಿತ್ತು. ಬಳಿಕ ಸರ್ಕಾರ ಈ ಕುರಿತಂತೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕನ್ನಡ ನಾಮಫಲಕಗಳಲ್ಲಿ ಬದಲಾವಣೆ ತರಲು ಮುಂದಾಗಿತ್ತು.
ಆದರೆ, ಈ ವೇಳೆ ಅಧಿವೇಶನ ನುಗದಿಯಾದ ಕಾರಣ ಸುಗ್ರೀವಾಜ್ಞೆಗೆ ಸಹಿ ಹಾಕಲು ಬರುವುದಿಲ್ಲವೆಂದು ರಾಜ್ಯಪಾಲರು ಆರ್ಡಿನನ್ಸ್ ಅನ್ನು ವಾಪಸ್ಸು ಕಳುಹಿಸಿದ್ದರು. ಈಗ ಇದು ಕಾನೂನಾಗಿ ಮಾರ್ಪಟ್ಟಿದಗದುದರಿಂದ ಇನ್ನು ಮುಂದೆ ರಾಜ್ಯದಲ್ಲಿ ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಕೇಂದ್ರಗಳು, ಉದ್ಯಮ, ಅಂಗಡಿ-ಮುಂಗಟ್ಟುಗಳು, ಮನೋರಂಜನ್ ಕೇಂದ್ರಗಳು, ಪ್ರಯೋಗಾಲಯಗಳು, ಹೋಟೆಲ್ ಗಳು ಸೇರಿದಂತೆ ಇನ್ನಿತರ ಕಟ್ಟಡಗಳ ಮೇಲಿನ ನಾಮಫಲಕಗಳು ಶೇ60 ರಷ್ಟು ಕನ್ನಡ ಭಾಷೆಯಲ್ಲಿರಬೇಕಾಗುತ್ತೆ. ಇದು ಕಡ್ಡಾಯ!