ಇತ್ತೀಚೆಗೆ ಫಿಟ್‌ನೆಸ್ ಹಾಗೂ ಆರೋಗ್ಯದ ಕುರಿತು ಬಹಳ ಕಾಳಜಿ ವ್ಯಕ್ತಪಡಿಸುತ್ತಿರುವ ನಡುವೆ ಹಲವು ರೀತಿಯ ಖಾದ್ಯಗಳು ಮುಂಚೂಣಿಗೆ ಬರುತ್ತಿವೆ. ಈ ನಡುವೆ ಇತ್ತೀಚೆಗೆ ಕಮಲದ ಹೂವಿನ ಬೀಜಗಳ ಬಳಕೆ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಹೊಂದಿರುವ ಕಮಲದ ಹೂವಿನ ಬೀಜಗಳನ್ನು ಆಹಾರ ಕ್ರಮದಲ್ಲಿ ಬಳಸಲಾಗುತ್ತಿದೆ. ಗೋಡಂಬಿ, ಬಾದಾಮಿ ಮತ್ತು ಪಿಸ್ತಾಗಳಂತಹ ಬೀಜಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಉಪಯೋಗವಿದೆಯೋ ಅದೇ ರೀತಿ ಈ ಕಮಲದ ಬೀಜಗಳಿಂದಲೂ ಅನೇಕ ಆರೋಗ್ಯಕರ ಅಂಶಗಳು ಅಡಗಿವೆಯಂತೆ. ಕಮಲದ ಬೀಜಗಳನ್ನು ದಿನಕ್ಕೆ 2 ಅಥವಾ 4 ಬಾರಿ ಸೇವಿಸುವುದರಿಂದ ಯಾವ ರೀತಿಯ ಉಪಯೋಗವಾಗಲಿದೆ. ಅದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಧನಾತ್ಮಕ ಅಂಶ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ. ಇಂದು ಹೆಚ್ಚಿನ ಜನರು ಅತಿಯಾದ ಒತ್ತಡದಿಂದ ನಿದ್ರಾಹೀನತೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹವರು ಮಲಗುವ ಮುನ್ನ ಒಂದು ಲೋಟ ಹಾಲಿನಲ್ಲಿ ಕೆಲವು ಕಮಲದ ಬೀಜದ ಪುಡಿ ಅಥವಾ ಬೀಜವನ್ನು ಹಾಕಿ ಚೆನ್ನಾಗಿ ಕುದಿಸಿ ಸೇವಿಸಬೇಕು. ಇದರಿಂದ ಅವರಿಗೆ ಉತ್ತಮ ಮತ್ತು ಶಾಂತ ನಿದ್ರೆ ಬರುತ್ತದೆ. ಸ್ನಾಯು ಸೆಳೆತ ಅಥವಾ ಸ್ನಾಯು ನೋವಿನಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ಕಮಲದ ಬೀಜಗಳನ್ನು ತಿನ್ನಬಹುದು. ವಿಶೇಷವಾಗಿ ಮಕ್ಕಳಿಗೆ ಕಮಲದ ಬೀಜಗಳನ್ನು ನೀಡಿದರೆ, ಅವರ ಸ್ನಾಯುಗಳು ವೇಗವಾಗಿ ಬೆಳೆಯುತ್ತವೆ. ಸಾಮಾನ್ಯವಾಗಿ ನಾವು ಕ್ಯಾಲ್ಸಿಯಂ ಪಡೆಯಲು ಹಾಲು, ಮೊಸರು, ಬೆಣ್ಣೆ ಇತ್ಯಾದಿಗಳನ್ನು ಸೇವಿಸುತ್ತೇವೆ. ಅದಕ್ಕೆ ಅನುಗುಣವಾಗಿ ಕ್ಯಾಲ್ಸಿಯಂ ಕಮಲದ ಬೀಜಗಳಲ್ಲಿಯೂ ಲಭ್ಯವಿದೆ. ಈ ಕ್ಯಾಲ್ಸಿಯಂ ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು. ತೂಕ ಇಳಿಸಿಕೊಳ್ಳಲು ಬಯಸುವವರು ಕಮಲದ ಬೀಜಗಳನ್ನು ತೆಗೆದುಕೊಳ್ಳಬಹುದು. ಏಕೆಂದರೆ ಇದು ಕೊಬ್ಬಿನ ಕ್ಯಾಲೋರಿಗಳಿಂದ ಮುಕ್ತವಾಗಿದೆ. ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನಾವು ಈ ಬೀಜಗಳಿಂದ ಪಡೆಯಬಹುದು. ಕಮಲದ ಬೀಜಗಳಲ್ಲಿರುವ ಕಿಣ್ವವು ದೇಹದಲ್ಲಿ ಕಂಡುಬರುವ ಪ್ರೋಟೀನ್‌ಗಳ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ಇದಲ್ಲದೆ ದೇಹದ ಹಾನಿಗೊಳಗಾದ ಪ್ರೋಟೀನ್‌ಗಳ ಮರುಪೂರಣ ಕೆಲಸ ಮಾಡುತ್ತದೆ. ಇದರಿಂದ ಆರೋಗ್ಯವಂತ ತ್ವಚೆ ಪಡೆಯಬಹುದಿದೆ. ಕಮಲದ ಬೀಜದಲ್ಲಿ ಅನೇಕ ಪೋಷಕಾಂಶ ಹಾಗೂ ವಿಟಮಿನ್ ಅಡಗಿರುವುದರಿಂದ ಈ ಬೀಜವನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. 100 ಗ್ರಾಂ ಕಮಲದ ಬೀಜಗಳಲ್ಲಿ 89 ಕ್ಯಾಲೋರಿ ಸಿಗುತ್ತದೆ. ಅವುಗಳಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಬಿ -6 ಮತ್ತು ಕಬ್ಬಿಣ ಸಮೃದ್ಧವಾಗಿದೆ. ಈ ಬೀಜಗಳು ಕೇವಲ 0.5% ಕೊಬ್ಬು ಮತ್ತು ಶೂನ್ಯ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತವೆ. ಕಮಲ ಹೂವಿನ ಬೀಜಗಳು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೈಬರ್, ಕಬ್ಬಿಣ ಮತ್ತು ಸತುವುಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದನ್ನು ಸೇವಿಸುವ ಪುರುಷರು ಹೆಚ್ಚಿದ ಕಾಮಾಸಕ್ತಿ ಹೊಂದುತ್ತಾರೆ. ಕಮಲದ ಬೀಜಗಳು ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಕೆ ನಂತಹ ಪೋಷಕಾಂಶಗಳನ್ನು ಸಹ ಹೊಂದಿರುತ್ತವೆ. ಮಧುಮೇಹದಿಂದ ಬಳಲುತ್ತಿರುವವರು ಫೈಬರ್‌ನಿಂದ ಸಮೃದ್ಧವಾಗಿರುವ ಕಮಲದ ಬೀಜಗಳನ್ನು ಸೇವಿಸಬಹುದು. ಇದರಲ್ಲಿರುವ ಆಯಂಟಿಆಕ್ಸಿಡೆಂಟ್‌ಗಳು ಮಧುಮೇಹದ ಪರಿಣಾಮಗಳನ್ನು ನಿಯಂತ್ರಿಸುತ್ತದೆ.