ಬೆಂಗಳೂರು: ಈ ಹಿಂದೆ ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದ 236 ತಾಲೂಕುಗಳ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕು ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತವೆಂದು ಒಟ್ಟು 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿತ್ತು. ಇದೀಗ ಮತ್ತೆ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.
22 ಸಾಧಾರಣ ಬರಪೀಡಿತ ತಾಲೂಕುಗಳಲ್ಲಿ ಮತ್ತೊಮ್ಮೆ ಬೆಳೆ ಹಾನಿ ಸಮೀಕ್ಷೆ ನಡೆಸಿ 11 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕು ಹಾಗೂ 11 ಸಾಧಾರಣ ಬರಪೀಡಿತ ತಾಲೂಕುಗಳೆಂದು ಅಧಿಕೃತವಾಗಿ ಘೋಷಿಸಿದ್ದು, ಒಟ್ಟು 216 ಬರ ಪೀಡಿತ ತಾಲೂಕುಗಳಲ್ಲಿ ಮುಂದಿನ ಆರು ತಿಂಗಳ ಬರ ನಿರ್ವಹಣೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಹೊಸದಾಗಿ ಬರ ಪೀಡಿತ ತಾಲೂಕು ಎಂದು ಘೋಷಿಸಿರುವ 21 ತಾಲೂಕುಗಳಲ್ಲಿ ಆ್ಯಪ್ ಮೂಲಕ ತಳಮಟ್ಟದ ನೈಜ ಸ್ಥಿತಿ ಪರಿಶೀಲಿಸಿ ಬರ ಕೈಪಿಡಿ ಅನ್ವಯ ದೃಢೀಕರಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಸುತ್ತೋಲೆ ಹೊರಡಿಸಿದ್ದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ತಾಲೂಕು ಗಳಲ್ಲಿ ಶೇ.10ರಷ್ಟು ಗ್ರಾಮಗಳನ್ನು ಆಯ್ಕೆ ಮಾಡಿ ಪ್ರಮುಖ ಬೆಳೆಗಳನ್ನು ಗುರುತಿಸಿದ ಬಳಿಕ ಅ.13 ರಂದು 21 ತಾಲೂಕು ಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ.