ನವದೆಹಲಿ: ಕರ್ನಾಟಕದಿಂದ ಆಯ್ಕೆಯಾದ ಐವರು ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಮೂವರು ಸಂಪುಟ ದರ್ಜೆ ಹಾಗೂ ಇಬ್ಬರು ರಾಜ್ಯ ಖಾತೆ ಸಚಿವರು.
ನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಹಾಗೂ ಧಾರವಾಡದ ಸಂಸದ ಪ್ರಲ್ಹಾದ ಜೋಶಿ ಸಚಿವರಾಗಿದ್ದರು. ಮತ್ತೆ ಅವರಿಗೆ ಅವಕಾಶ ದೊರಕಿದೆ. ಇಬ್ಬರೂ ಬ್ರಾಹ್ಮಣ ಸಮುದಾಯದವರು.
ಮಂಡ್ಯದಿಂದ ಜೆಡಿಎಸ್ ಸಂಸದರಾಗಿ ಆಯ್ಕೆಯಾಗಿರುವ ಎಚ್.ಡಿ.ಕುಮಾರಸ್ವಾಮಿ ಸಂಪುಟ ದರ್ಜೆ ಸಚಿವರಾಗಿ ಸರತಿಯಲ್ಲಿ 9ನೇಯವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿಯ ಎಂಟು ನಾಯಕರು ಪ್ರಮಾಣ ಸ್ವೀಕರಿಸಿದ ಬಳಿಕ ಎನ್ಡಿಎ ಒಕ್ಕೂಟದ ಮಿತ್ರಪಕ್ಷಗಳಲ್ಲಿ ಮೊದಲಿಗರಾಗಿ ಅವರು ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.
ಲಿಂಗಾಯತ ಕೋಟಾದಲ್ಲಿ ವಿ.ಸೋಮಣ್ಣ ಅವಕಾಶ ಪಡೆದಿದ್ದಾರೆ. ಶೋಭಾ ಕರಂದ್ಲಾಜೆ ಅವರು ಹಿಂದಿನ ಸರ್ಕಾರದಲ್ಲಿ ಕೃಷಿ ಖಾತೆ ರಾಜ್ಯ ಸಚಿವರಾಗಿದ್ದರು. ಒಕ್ಕಲಿಗ ಸಮುದಾಯದಿಂದ ಕುಮಾರಸ್ವಾಮಿ ಅವರು ಸಚಿವರಾಗುತ್ತಿರುವುದರಿಂದ ಶೋಭಾ ಮತ್ತೆ ಸಚಿವರಾಗುವುದು ಅನುಮಾನ ಎಂಬ ಸುದ್ದಿಗಳು ಹರಡಿದ್ದವು. ಆದರೆ ಒಕ್ಕಲಿಗರ ಪ್ರಾಬಲ್ಯ ಇರುವ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿಕೂಟವು ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ, ಒಕ್ಕಲಿಗ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.