ಕರ್ನಾಟಕದ 2ನೇ ಹಂತದ ಲೋಕಸಭಾ ಚುನಾವಣೆ ರಂಗೇರ ತೊಡಗಿದೆ. ಕೇಂದ್ರದ ಘಟಾನುಘಟಿ ನಾಯಕರು ರಾಜ್ಯಕ್ಕೆ ಬಂದು ಅಬ್ಬರದ ಮತಯಾಚನೆ ಮಾಡ್ತಿದ್ದಾರೆ.
ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಎಲ್ಲ ಕಡೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಒಂದೇ ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಚಾರಕ್ಕೆ ಬರ್ತಿರೋದು ಬಾಗಲಕೋಟೆ ಅಖಾಡದಲ್ಲಿ ಸಂಚಲನ ಸೃಷ್ಟಿಸಿದೆ. ಒಂದೇ ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಮೋದಿ ಮತ್ತು ಪ್ರಿಯಾಂಕಾ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಬಾಗಲಕೋಟೆ ನವನಗರದ ತೋಟಗಾರಿಕಾ ವಿವಿ ಆವರಣದಲ್ಲಿ ನಡೆಯುವ ಬೃಹತ್ ಬಹಿರಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವಳಿ ಜಿಲ್ಲೆಯ ಜನತೆಯನ್ನುದ್ದೇಶಿಸಿ ಮಾತನಾಡಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿ ಬಲ ತುಂಬಲಿದ್ದಾರೆ.
ಅವಳಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳಾದ ರಮೇಶ ಜಿಗಜಿಣಗಿ ಹಾಗೂ ಪಿ.ಸಿ.ಗದ್ದಿಗೌಡರ ಸೇರಿದಂತೆ ಅನೇಕ ಭಾಜಪ ಹಾಗೂ ಜೆಡಿಎಸ್ ಪ್ರಮುಖರು, ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು, ಬೆಳಿಗ್ಗೆ 11.20ಕ್ಕೆ ಬೆಳಗಾವಿಗೆ ಆಗಮಿಸುವ ಪ್ರಿಯಾಂಕಾ ಗಾಂಧಿ, ಬೆಳಗಾವಿಯಿಂದ ಜಮಖಂಡಿಗೆ ಹೆಲಿಕಾಪ್ಟರ್ನಲ್ಲಿ ತೆರಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪರ ಪ್ರಚಾರ ಮಾಡಲಿದ್ದಾರೆ.
ಬಳಿಕ ಜಮಖಂಡಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಬೆಳಗಾವಿ ಮಾರ್ಗವಾಗಿ ಕಲಬುರಗಿ ಕಡೆ ಪ್ರಯಾಣ ಬೆಳೆಸಲಿದ್ದಾರೆ. ಬಾಗಲಕೋಟೆ ಮಾತ್ರವಲ್ಲ, ಕಲಬುರಗಿಯಲ್ಲೂ ಇವತ್ತು ಕಾಂಗ್ರೆಸ್ ಮತ್ತು ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿವೆ. ಬಾಗಲಕೋಟೆಯಲ್ಲಿ ಸಮಾವೇಶದ ಬಳಿಕ ಪ್ರಿಯಾಂಕಾ ಗಾಂಧಿ, ಕಲಬುರಗಿಗೆ ತೆರಳಲಿದ್ದಾರೆ. ಕಲಬುರಗಿಯ ಸೇಡಂನಲ್ಲಿ ಖರ್ಗೆ ಅಳಿಯ ರಾಧಾಕೃಷ್ಣ ಪರ ಮತಯಾಚನೆ ಮಾಡಲಿದ್ದಾರೆ.
ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಕಲಬುರಗಿ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಜೇವರ್ಗಿಯಲ್ಲಿ ವಿಯೇಂದ್ರ ರೋಡ್ಶೋ ನಡೆಸಿದ್ರೆ, ಚಿತ್ತಾಪುರದಲ್ಲಿ ಸಿ.ಟಿ.ರವಿ ಪ್ರಚಾರ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಪರ ಕ್ಯಾಂಪೇನ್ ಮಾಡಲಿದ್ದಾರೆ.