ಬೆಂಗಳೂರು, ಮೇ 20: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ ಪೂರೈಸಿದೆ. ಕಳೆದ ವರ್ಷ ಮೇ 20ರಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ವರ್ಷ ಸಂಭ್ರಮದಲ್ಲಿರುವ ವೇಳೆ ಸಿದ್ದರಾಮಯ್ಯ ಅವರಿಗೆ ಕೆಲವು ಸವಾಲುಗಳು ಮುಂದಿವೆ. ಲೋಕಸಭಾ ಚುನಾವಣೆ ಬಳಿಕ ಐದು ಗ್ಯಾರೆಂಟಿಗಳು ಕೊನೆಗೊಳ್ಳುತ್ತವೆಯೇ? ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಈ ಒಂದು ವರ್ಷದಲ್ಲಿ ಸರ್ಕಾರ ‘ಶಕ್ತಿ, ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಯುವ ನಿಧಿ’ ಎಂಬ ಐದು ಗ್ಯಾರೆಂಟಿಗಳನ್ನು ಸಾಕಾರಗೊಳಿಸಲಾಗಿದೆ. ಈ ಮೂಲಕ ಸಂಸದ ಮತ್ತು ಕರ್ನಾಟಕದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ‘ಕಾಂಗ್ರೆಸ್‌ನ ಜನಪರ ಸರ್ಕಾರಕ್ಕೆ ಇದು ಅದ್ಭುತ ವರ್ಷ” ಎಂದು ಬಣ್ಣಿಸಿದ್ದಾರೆ.
ಗ್ಯಾರೆಂಟಿ ಯೋಜನೆಗಳ ಮೂಲಕ ಕೇವಲ ಒಂಬತ್ತೆ ತಿಂಗಳಲ್ಲಿ ಕರ್ನಾಟಕದ 4.6 ಕೋಟಿ ಜನರನ್ನು ಕಾಂಗ್ರೆಸ್ ತಲುಪಿದೆ. ಇದರಿಂದ ಜನರು ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಆರ್ಥಿಕತೆ ಸುಧಾರಿಸಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಂಡಿದೆ.
ಗ್ಯಾರೆಂಟಿಗಳ ಸ್ಥಗಿತಕ್ಕೆ: ಸಿದ್ದರಾಮಯ್ಯ ಹೇಳಿದ್ದೇನು?
ಇನ್ನೂ ಅಸ್ತಿತ್ವದಲ್ಲಿರುವ ರಾಜ್ಯ ಕಾಂಗ್ರೆಸ್‌ನ ಐದು ಗ್ಯಾರೆಂಟಿ ಯೋಜನೆಗಳು, ಸದರಿ ಲೋಕಸಭೆ ಚುನಾವಣೆಯ ನಂತರ ಸ್ಥಗಿತಗೊಳಿಸಲಾಗುತ್ತದೆ. ಚುನಾವಣೆ ಮುಗಿದ ಬಳಿಕ ಉಚಿತ ಯೋಜನೆ ಬಂದ ಎಂಬ ಆರೋಪಗಳಿವೆ. ಇದಕ್ಕೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಇದೆಲ್ಲ ಬಿಜೆಪಿ ಊಹೆಗಳಾಗಿದ್ದು, ಒಪ್ಪಲು ಅವರು ನಿರಾಕರಿಸಿದರು. ಲೋಸಕಭಾ ಚುನಾವಣೆ ನಂತರವು ಕಾಂಗ್ರೆಸ್ ನ 5 ಗ್ಯಾರೆಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಮುಂದುವರಿಯುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸರ್ಕಾರದ ವರ್ಷದ ಸಂಭ್ರಮ, ಸಾಧನೆಯನ್ನು ದೊಡ್ಡ ಕಾರ್ಯಕ್ರಮ ಮಾಡಿ ರಾಜ್ಯದ ಜನರಿಗೆ ತಿಳಿಸಬೇಕಿತ್ತು. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಇದು ಸಾಧ್ಯವಾಗಿಲ್ಲ ಎಂದು ಸಿಎಂ ತಿಳಿಸಿದ್ದಾರೆ.
ಸಿಎಂ-ಡಿಸಿಎಂಗೆ ಸುರ್ಜೆವಾಲ ಅಭಿನಂದನೆ
ಸರ್ಕಾರದ ವರ್ಷ ಸಾಧನೆ ಬಣ್ಣಿಸಿದ ಸುರ್ಜೇವಾಲ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ರಾಜ್ಯ ಸರ್ಕಾರವು ಇಷ್ಟು ಕಡಿಮೆ ಅವಧಿಯಲ್ಲಿ ಅವಿರತವಾಗಿ ಕೆಲಸ ಮಾಡಿದೆ. ಅಸಂಖ್ಯಾತ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸುರ್ಜೇವಾಲ ಹೇಳಿದರು.
ಕಾಂಗ್ರೆಸ್ ಸರಕಾರ ಎಲ್ಲ ಸಮುದಾಯಗಳ ಏಳಿಗೆಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ. ಸಮಾನತೆ, ಸಮಾನತೆಯ ಸಿದ್ಧಾಂತದ ಆಧಾರದ ಮೇಲೆ ನಮ್ಮ ಯೋಜನೆಗಳು ಎಲ್ಲ 4.6 ಕೋಟಿ ಫಲಾನುಭವಿಗಳಿಗೆ ಸಿಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ವಿಶ್ವ ಅಭಿವೃದ್ಧಿಗೆ ಗ್ಯಾರೆಂಟಿಗಳು ಮಾದರಿ: ರಣದೀಪ್
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕೇವಲ ರಸ್ತೆ, ಸೇತುವೆ ಗಳಂತಹ ಮೂಲಸೌಕರ್ಯಗಳ ಅಭಿವೃದ್ಧಿ ಕೆಲಸ ಮಾತ್ರ ಮಾಡದೇ ಬಡವರು, ಮಹಿಳೆಯರು, ರೈತರು, ಕಾರ್ಮಿಕ ಸಮುದಾಯದ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೆ ತಂದಿದೆ.
ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಕೇವಲ ಕರ್ನಾಟಕ, ದೇಶಕ್ಕೆ ಮಾತ್ರವಲ್ಲದೇ, ಇಡಿ ವಿಶ್ವದ ಸರ್ವಾಂಗೀಣ ಅಭಿವೃದ್ಧಿ ಮತ್ತು ಪ್ರಗತಿಯ ಮಾದರಿ ಆಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಕೇವಲ ಭರವಸೆಗಳನ್ನು ನೀಡಲಿಲ್ಲ. ಕೊಟ್ಟ ಭರವಸೆಯಂತೆ ಸಹಿ ಮಾಡಿದ ಗ್ಯಾರಂಟಿ ಕಾರ್ಡ್‌ಗಳನ್ನು ಸಹ ನೀಡಿದ್ದೇವೆ ಎಂದು ಅವರು ತಮ್ಮ ಸಾಧನೆ ಕುರಿತು ಮಾಹಿತಿಗಳನ್ನು ಹಂಚಿಕೊಂಡರು.
ಕೇಂದ್ರ ಅಕ್ಕಿ ನಿರಾಕರಿಸಿದರೂ ಸಮಾನ ಹಣ ಹಂಚಿಕೆ
ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಬಹುಮತದಿಂದ ಕಾಂಗ್ರೆಸ್‌ಗೆ ಆಶೀರ್ವದಿಸಿದ್ದಾರೆ. ಅಧಿಕಾರ ಬಂದ ಕೂಡಲೇ ಒಂದು ಕ್ಷಣವನ್ನು ಹಾಳು ಮಾಡದೇ ಒಂಬತ್ತು ತಿಂಗಳೊಳಗೆ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಅನ್ನಭಾಗ್ಯ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದರೂ ಸಹಿತ ಫಲಾನುಭವಿಗಳಿಗೆ ಮೋಸ ಮಾಡದೇ ಐದು ಕೇಜಿ ಅಕ್ಕಿ ಬದಲಾಗಿ ಅದಕ್ಕೆ ಸಮಾಜ ಹಣ ನೀಡಿದ್ದೇವೆ ಎಂದರು.
ಈ ವರ್ಷ ರಾಜ್ಯಕ್ಕೆ ಬರಗಾಲ ಉಂಟಾದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯ ನಿರ್ವಹಿಸಿದ್ದೇವೆ. ಬರೋಬ್ಬರಿ 223 ತಾಲೂಕುಗಳು ಬರಗಾಲ ಪೀಡಿತವಾಗಿದ್ದವು. ಅವುಗಳಿಗೆ ವಿಪತ್ತು ಪರಿಹಾರದ ಅಡಿ ಕೇಂದ್ರದಿಂದ ಹಣ ಬರಲಿಲ್ಲ. ಆದರೆ ನಾವು ಜನರಿಗೆ ಭದ್ರತೆ ಒದಗಿಸಿದ್ದೇವೆ.
ಅನೇಕ ಬರ ಪೀಡಿತ ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಹಣ ವಿತರಿಸಿದ್ದೇವೆ. ಬರ ಸಂಕಷ್ಟ ತಪ್ಪಿಸಲು ಸರ್ಕಾರ ಜನರೊಂದಿಗೆ ಕೈಜೋಡಿದೆ. ಈ ಮೂಲಕ ಕಾಂಗ್ರೆಸ್ ಜನಪರ ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯರ ಮುಂದಿರುವ ಸವಾಲುಗಳು
ಇತ್ತ ವಿಪಕ್ಷ ನಾಯಕರು ರಾಜ್ಯದಲ್ಲಿ ಕಾಂಗ್ರೆಸ್ ಸಾಧನೆ ಸೂನ್ಯ, ಗ್ಯಾರೆಂಟಿ ಬಗ್ಗೆ ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರು ಅಭಿವೃದ್ಧಿ ಯೋಜನೆಗೆ ಹಣ ನೀಡಿಲ್ಲ. ಯಾವ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಮೊದಲ ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಶಸ್ವಿಯಾಗಿ ಐದು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದೀಗ ಎರಡನೇ ವರ್ಷಕ್ಕೆ ಕಾಲಿಟ್ಟಿರುವ ಅವರು, ಅಭಿವೃದ್ಧಿಗೆ ಹಣ ಹೊಂದಿಸಬೇಕಿದೆ. ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬದು ಕುತೂಹಲಕರವಾಗಿದೆ.