ಬೆಂಗಳೂರು: ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಉದ್ದೇಶದಿಂದ ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್ಡಿಬಿ) ನೀಡುವ ಅನುದಾನದಲ್ಲಿ ಕನಿಷ್ಠ ಶೇ 10 ರಷ್ಟನ್ನು ಈ ಭಾಗದ ವಿಶ್ವವಿದ್ಯಾಲಯಗಳ ಬಳಕೆಗೆ ಮೀಸಲಿಡಬೇಕು ಎಂದು ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ನಿರ್ದೇಶನ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕೆಕೆಆರ್ಡಿಬಿಗೆ ನೀಡಿದ್ದ ₹ 3 ಸಾವಿರ ಕೋಟಿಯನ್ನು ಕಲ್ಯಾಣ ಕರ್ನಾಟಕ ಭಾಗದ ವಿವಿಧ ವಲಯಗಳಿಗೆ ಹಂಚಿಕೆ ಮಾಡಿ ಅನುಮೋದನೆಗಾಗಿ ಕಡತವನ್ನು ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಕಳುಹಿಸಿತ್ತು. ಈ ಕಡತವನ್ನು ತಮ್ಮ ಅಭಿಪ್ರಾಯ ಮತ್ತು ನಿರ್ದೇಶನದ ಸಹಿತ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ.
ಹೈದರಾಬಾದ್– ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಆದೇಶ–2023ರ ಸೆಕ್ಷನ್ 22(1) ಮತ್ತು 25ರಡಿ ರಾಜ್ಯಪಾಲರು ಈ ನಿರ್ದೇಶನ ನೀಡಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ತಿಳಿಸಿದ್ದಾರೆ.
ವಿಶ್ವವಿದ್ಯಾಲಯಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಅನುದಾನ ಬಿಡುಗಡೆ ಮಾಡುವ ಈ ಹಿಂದಿನ ಮತ್ತು ಇನ್ನು ಮುಂದಿನ ಪ್ರಸ್ತಾವಗಳನ್ನು ಕೈಬಿಡಬೇಕು. ಅದರ ಬದಲು ನೇರವಾಗಿ ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದೂ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.