ಕಲ್ಲಂಗಡಿ ಹಣ್ಣು, ಬೀಜದಲ್ಲಿರುವ ಆರೋಗ್ಯಕರ ಪ್ರಯೋಜನಗಳು

ಸಭರಿತ ಹಣ್ಣು ಎಂದಾಕ್ಷಣ ನೆನಪಿಗೆ ಬರುವ ಮೊದಲ ಹಣ್ಣು ಎಂದರೆ, ಅದು ಕಲ್ಲಂಗಡಿ ಹಣ್ಣು. ಸಾಕಷ್ಟು ಮಂದಿ ಕಲ್ಲಂಗಡಿ ಹಣ್ಣು ಇಷ್ಟಪಟ್ಟು ಸೇವಿಸುತ್ತಾರೆ. ಹಣ್ಣಿನಲ್ಲಿ ನೀರಿನಾಂಶ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಂತೂ ಈ ಹಣ್ಣು ಅಮೃತವೆಂದೇ ಭಾಸವಾಗುವುದುಂಟು. ಈ ಹಣ್ಣು ಹೆಚ್ಚು ಸಿಹಿಯಾಗಿರುವುದರ ಜತೆಗೆ ಆಂಟಿ ಆಕ್ಸಿಡೆಂಟ್​ಗಳನ್ನು ಹೊಂದಿರುತ್ತದೆ. ಜತೆಗೆ ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.

ಕಲ್ಲಂಗಡಿ ಹಣ್ಣಿನಲ್ಲಿ ಕ್ಯಾಲೊರಿ ಕಡಿಮೆ ಇರುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಎ ಅಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕೇವಲ ಹಣ್ಣಷ್ಟೇ ಅಲ್ಲ, ಹಣ್ಣಿನ ಸಿಪ್ಪೆ ಹಾಗೂ ಬೀಜವನ್ನೂ ಬಳಕೆ ಮಾಡಿ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಸಾಕಷ್ಟು ಜನರು ಅಳವಡಿಸಿಕೊಳ್ಳುತ್ತಿದ್ದು, ನೀರಿನಾಂಶ ಹೆಚ್ಚಾಗಿರುವ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದಾರೆ. ಹಣ್ಣಷ್ಟೇ ಅಲ್ಲ, ಅವುಗಳ ಸಿಪ್ಪೆ ಹಾಗೂ ಬೀಜಗಳನ್ನು ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಸೇವನೆ ಮಾಡುತ್ತಿದ್ದಾರೆ.

Advertisement

ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ವಿವಿಧ ಖನಿಜಗಳು ಮತ್ತು ಸತು, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪ್ರೋಟೀನ್‌ಗಳಂತಹ ಪೋಷಕಾಂಶಗಳಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ಇದು ಕೊಡುಗೆ ನೀಡುತ್ತವೆ, ಪೌಷ್ಠಿಕಾಂಶ ಪಡೆಯಲು ಔಷಧಗಳ ಸೇನೆಗಳ ಬದಲು ಇವುಗಳ ಬೀಜಗಳ ಬಳಕೆ ಉತ್ತಮ ಮಾರ್ಗವಾಗಿದೆ ಎದು ವೈದ್ಯರು ಹೇಳುತ್ತಾರೆ.

  • ಕಲ್ಲಂಗಡಿ ಹಣ್ಣಿನಲ್ಲಿರುವ ವಿಟಮಿನ್‌ ಎ ಹಾಗೂ ಸಿ ಅಂಶ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ. ವಿಟಮಿನ್‌ ಸಿ ಚರ್ಮದಲ್ಲಿ ಕೊಲಾಜನ್‌ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಲ್ಲಿ ಪೋಷಕಾಂಶ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಉತ್ತಮ. ಅಧ್ಯಯನವೊಂದರ ಪ್ರಕಾರ ವಿಟಮಿನ್‌ ಸಿ ಅಂಶ ಹೊಂದಿರುವ ಹಣ್ಣು, ತರಕಾರಿ, ಆಹಾರಗಳ ಸೇವನೆಯಿಂದ ಚರ್ಮದಲ್ಲಿ ಸುಕ್ಕು ಹಾಗೂ ಒಣ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ವಿಟಮಿನ್‌ ಎ ಅಂಶದ ಚರ್ಮದ ಆರೋಗ್ಯಕ್ಕೆ ಅವಶ್ಯ, ಅಲ್ಲದೆ ಇದು ಚರ್ಮದ ಕೋಶಗಳನ್ನು ಸರಿಪಡಿಸುತ್ತದೆ.
  • ಕಲ್ಲಂಗಡಿಹಣ್ಣಿನಲ್ಲಿರುವ ಲೈಕೊಪೀನ್‌ ಅಂಶ ಕಣ್ಣಿನ ಆರೋಗ್ಯಕ್ಕೂ ಸಹಕಾರಿ. ವಯಸ್ಸಾದಂತೆ ಎದುರಿಸುವ ಮ್ಯಾಕ್ಯುಲರ್ ಡಿಜನರೇಶನ್ ಎನ್ನುವ ಕಣ್ಣಿನ ಸಮಸ್ಯೆಗೂ ಇದರ ಸೇವನೆ ಉತ್ತಮ.
  • ಉರಿಯೂತವು ಅನೇಕ ದೀರ್ಘಾವಧಿ ಕಾಯಿಲೆಗಳನ್ನು ಹರಡುತ್ತದೆ. ಇದರಲ್ಲಿರುವ ಲೈಕೊಪೀನ್‌, ವಿಟಮಿನ್‌ ಸಿ ಹಾಗೂ ಆಂಟಿಆಕ್ಸಿಡೆಂಟ್‌ಗಳ ಕಾರಣದಿಂದ ಉರಿಯೂತದ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಆಕ್ಸಿಡೇಟಿವ್‌ ಹಾನಿಯನ್ನೂ ನಿಯಂತ್ರಿಸುತ್ತದೆ.
  • ಕಲ್ಲಂಗಡಿಯಲ್ಲಿರುವ ಕೆಲವೊಂದು ಪೋಷಕಾಂಶಗಳು ಹೃದಯ ಆರೋಗ್ಯಕ್ಕೆ ಉತ್ತಮ. ಹೃದಯ ಸಮಸ್ಯೆ ನಿಯಂತ್ರಣಕ್ಕೆ ಉತ್ತಮ ಆಹಾರ ಪದ್ಧತಿಯು ಮುಖ್ಯವಾಗುತ್ತದೆ. ಇದರ ಸೇವನೆಯಿಂದ ಅಧಿಕರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ ಪ್ರಮಾಣವು ನಿಯಂತ್ರಣಕ್ಕೆ ಬರುತ್ತದೆ. ಅಧ್ಯಯನಗಳ ಪ್ರಕಾರ ಲೈಕೊಪೀನ್‌ ಕೊಲೆಸ್ಟ್ರಾಲ್‌ ಹಾಗೂ ರಕ್ತದೊತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಸಿಟ್ರುಲಿನ್‌ ಎನ್ನುವ ಅಮೈನೋ ಆಮ್ಲವನ್ನು ಹೊಂದಿದೆ. ಇದರ ಸೇವನೆಯಿಂದ ದೇಹದಲ್ಲಿ ನೈಟ್ರಿಕ್‌ ಆಕ್ಸೈಡ್‌ ಮಟ್ಟ ಹೆಚ್ಚುತ್ತದೆ.
  • ಕಲ್ಲಂಗಡಿಯಲ್ಲಿ ಹಲವು ರೀತಿ ಸಸ್ಯ ಸಂಯುಕ್ತಗಳಿವೆ. ಇದರಲ್ಲಿ ಲೈಕೊಪೀನ್‌ ಹಾಗೂ ಕುಕುರ್ಬಿಟಾಸಿನ್‌ ಇ ಅಂಶಗಳಿದ್ದು ಇದು ಆಂಟಿಕ್ಯಾನ್ಸರ್‌ ಪರಿಣಾಮಗಳನ್ನು ಹೊಂದಿದೆ. ಲೈಕೊಪೀನ್‌ ಅಂಶ ಇರುವ ಆಹಾರ ಪದಾರ್ಥಗಳ ಸೇವನೆಯಿಂದ ಪ್ರಾಸ್ಟೇಟ್‌ ಹಾಗೂ ಕೊಲೊರೆಕ್ಟರ್‌ ಕ್ಯಾನ್ಸರ್‌ನ ಅಪಾಯದ ಸಂಭವ ಕಡಿಮೆ ಇರುತ್ತದೆ.
  • ಕಲ್ಲಂಗಡಿಯಲ್ಲಿ ಹಲವು ವಿಧದ ಪೋಷಕಾಂಶಗಳಿವೆ. ಇದರಲ್ಲಿ ಪೊಟ್ಯಾಶಿಯಂ, ಮೆಗ್ನಿಶಿಯಂ, ವಿಟಮಿನ್‌ ಎ ಹಾಗೂ ಸಿ ಅಂಶ ಸಮೃದ್ಧವಾಗಿದೆ. ಇದರಲ್ಲಿ ಸಿಟ್ರುಲಿನ್‌ ಸಮೃದ್ಧವಾಗಿದೆ. ಇದು ಅಮೈನೊ ಆಮ್ಲವಾಗಿದ್ದು, ವ್ಯಾಯಾಮದ ಕಾರ್ಯಕ್ಷಮತೆಯನ್ನೂ ಸುಧಾರಿಸುತ್ತದೆ. ವಿಟಮಿನ್‌ ಸಿ ಹಾಗೂ ಉತ್ಕರ್ಷಣ ವಿರೋಧಿ ಗುಣವನ್ನು ಹೊಂದಿದೆ. ಇದರಲ್ಲಿನ ಸಂಯಕ್ತಗಳು ಫ್ರಿ ರಾಡಿಕಲ್ಸ್‌ಗಳ ವಿರುದ್ಧ ಹೋರಾಡುತ್ತವೆ. ಇದರಿಂದ ಹಲವು ರೋಗಗಳು ಬಾರದಂತೆ ತಡೆಯಬಹುದು.
  • ಬೇಸಿಗೆಯಲ್ಲಿ ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಕಲ್ಲಂಗಡಿ ಹಣ್ಣಿನ ಸೇವನೆ ಅಥವಾ ಇದನ್ನು ಜ್ಯೂಸ್‌ ಮಾಡಿ ಸೇವಿಸುವುದರಿಂದ ನಿರ್ಜಲೀಕರಣದಿಂದ ದೂರ ಉಳಿಯಬಹುದು. ಇದು ದೇಹದ ಉಷ್ಣಾಂಶವನ್ನು ಸಮಸ್ಥಿತಿಗೆ ತರುತ್ತದೆ. ಜೀವಕೋಶಗಳಿಗೆ ಪೋಷಕಾಂಶವನ್ನು ಒದಗಿಸುತ್ತದೆ. ಅಂಗಾಂಶಗಳ ಕಾರ್ಯ ಸುಧಾರಣೆಗೆ ನೆರವಾಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಶೇ 92ರಷ್ಟು ನೀರಿನಂಶವಿದ್ದು, ಪ್ರತಿನಿತ್ಯ ಇದರ ಸೇವನೆ ಉತ್ತಮ. ಇದು ಕಡಿಮೆ ಕ್ಯಾಲೊರಿ ಅಂಶ ಹೊಂದಿದ್ದು, ದೇಹತೂಕ ಇಳಿಸಲು ಸಹಕಾರಿ.
  • ಇದರಲ್ಲಿ ಸಾಕಷ್ಟು ನೀರಿನಂಶ ಹಾಗೂ ನಾರಿನಂಶವೂ ಇದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಾರಿನಂಶ ಮಲಬದ್ಧತೆಯನ್ನು ನಿಯಂತ್ರಿಸುತ್ತದೆ.
  • ಕಲ್ಲಂಗಡಿ ಹಣ್ಣಿನ ಬೀಜ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸಬಹುದು. ಬೀಜಗಳಲ್ಲಿ ಕಬ್ಬಿಣಾಂಶ ಇರವುದರಿಂದ ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
  • ಹಣ್ಣಿನಲ್ಲಿ ಪಾಲಿಅನ್‌ಸ್ಯಾಚುರೇಟೆಡ್ ಮತ್ತು ಮೊನೊಸಾಚುರೇಟೆಡ್ ನಂತರ ಉತ್ತಮ ಕೊಬ್ಬಿನ ಅಂಶ ಇದ್ದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಉತ್ತಮವಾಗಿರುತ್ತದೆ. 

    ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡುವುದು ಹೇಗೆ…

    • ಕಲ್ಲಂಗಡಿ ಬೀಜಗಳಿಂದ ಲಡ್ಡುಗಳನ್ನೂ ತಯಾರಿಸಬಹುದು.
    • ಸಿಡಿ ತಿನಿಸುಗಳು ಮತ್ತು ಖಾರದ ತಿನಿಸುಗಳ ಸಿದ್ಧಪಡಿಸುವ ವೇಳೆಯೂ ಇದನ್ನು ಸೇರ್ಪಡೆಗೊಳಿಸಬಹುದು.
    • ಹಾಲಿನೊಂದಿಗೂ ಇದನ್ನು ಸೇವನೆ ಮಾಡಬಹುದು.
    • ಕಲ್ಲಂಗಡಿ ಬೀಜಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಬಳಿಕ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಿರಿ. ಬಳಿಕ ಒಂದು ಗ್ಲಾಸ್ ನಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಉಪ್ಪು ಸೇರಿಸಿ ಕರಗಿಸಿ, ಈ ನೀರನ್ನು ಬಾಣಲೆಗೆ ಹಾಕಿ ಮತ್ತೆ ಬೀಜಗಳನ್ನು ಹುರಿದುಕೊಳ್ಳಿ ಬಳಿಕ ಗಾಳಿಯಾಡದ ಜಾಡಿಯಲ್ಲಿ ಅವುಗಳನ್ನು ಹಲವು ದಿನಗಳವರೆಗೆ ಸಂಗ್ರಹಿಸಿ. ಹಸಿವಿನಿಂದ ಇರುವಾಗ ಸೇವಿಸಿದರೆ, ಆರೋಗ್ಯ ವೃದ್ಧಿಯಾಗುತ್ತದೆ. ಇದು ರುಚಿಕರವಾದ ಸಂಜೆಯ ತಿಂಡಿಯಾಗಿ ಉತ್ತಮ ಆಯ್ಕೆಯಾಗಿದೆ.
    • ಇವುಗಳು ನಿಮ್ಮ ಆಹಾರದ ಪೌಷ್ಠಿಕಾಂಶವನ್ನು ಹೆಚ್ಚಿಸುತ್ತದೆ ಮತ್ತು ಈ ಸಣ್ಣ ಬೀಜಗಳನ್ನು ನಿಮ್ಮ ಸಲಾಡ್‌ಗಳಿಗೆ ಅಥವಾ ಇತರ ಒಣಬೀಜಗಳೊಂದಿಗೂ ಸೇವಿಸಬಹುದು.

    ಕಲ್ಲಂಗಡಿ ಬೀಜಗಳನ್ನು ಯಾರು ಸೇವಿಸಬಹುದು?

    • ಅಲರ್ಜಿ ಹೊಂದಿರುವವರು ಬಿಟ್ಟರೆ. ಎಲ್ಲರೂ ಹಣ್ಣಿನ ಬೀಜಗಳನ್ನು ಸೇವನೆ ಮಾಡಬಹುದು.
    • ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಸಮಸ್ಯೆ ಎದುರಾಗುವುದರಿಂದ 6-8 ತಿಂಗಳ ಕೆಳಗಿನ ಮಕ್ಕಳಿಗೆ ನೀಡದಂತೆ ಸಲಹೆ ನೀಡಲಾಗುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement