ಕೊಚ್ಚಿ,: ಕೊಚ್ಚಿಯ ಕಳಮಶೇರಿಯಲ್ಲಿನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಭೀಕರ ಸರಣಿ ಸ್ಫೋಟದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆಯ ಹಿನ್ನಲೆಯಲ್ಲಿ ಕೇರಳದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಸ್ಥಳದಲ್ಲಿ ಈಗಾಗಲೇ ಬಾಂಬ್ ಸ್ಕ್ವಾಡ್, ಫೊರೆನ್ಸಿಕ್ಸ್ ತಂಡ ಬೀಡುಬಿಟ್ಟಿದೆ.
ಜಮ್ರಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್ನಲ್ಲಿ ಯೆಹೋವನ ಸಾಕ್ಷಿ ಸಮಾವೇಶದಲ್ಲಿ ಭಾನುವಾರದಂದು 9.30 ಕ್ಕೆ ಸ್ಫೋಟ ಸಂಭವಿಸಿತ್ತು. ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಸ್ಫೋಟದಲ್ಲಿ ಮಕ್ಕಳು ಸೇರಿದಂತೆ ಒಟ್ಟು 36 ಜನರು ಗಾಯಗೊಂಡಿದ್ದಾರೆ ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಎನ್‌ಎಸ್‌ಕೆ ಉಮರ್ಶ್ ದೃಢಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಭಯೋತ್ಪಾದಕ ಕೃತ್ಯವಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಫೊರೆನ್ಸಿಕ್ಸ್ ತಂಡ ಆಗಮಿಸಿದೆ. ಸ್ಥಳಕ್ಕೆ ಎನ್ಐಎ ತಂಡ ತೆರಳಿದ್ದು, ಸ್ಪೋಟದ ಬಗ್ಗೆ ತನಿಖೆ ನಡೆಸಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಯೆಹೋವನ ಸಾಕ್ಷಿ ಸಮಾವೇಶವು ವಾರ್ಷಿಕ ಕೂಟವಾಗಿದ್ದು, ಇದರಲ್ಲಿ “ಪ್ರಾದೇಶಿಕ ಸಮಾವೇಶಗಳು” ಎಂದು ಕರೆಯಲ್ಪಡುವ ದೊಡ್ಡ ಸಭೆಗಳು ಸಾಮಾನ್ಯವಾಗಿ ಮೂರು ದಿನಗಳ ಕಾಲ, ಅಂದರೆ ಶುಕ್ರವಾರದಿಂದ ಭಾನುವಾರದವರೆಗೆ ನಡೆಯುತ್ತವೆ.