ಬಳ್ಳಾರಿ : ಸೆ.12ರಂದು ನಡೆದಿದ್ದ ಹಣ, ಆಭರಣ ದರೋಡೆ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೇ ಕಂಬಿ ಎಣಿಸುತ್ತಿದ್ದಾರೆ. ಬ್ರೂಸ್‌ಪೇಟೆ ಹೆಡ್ ಕಾನ್‌ಸ್ಟೇಬಲ್ ಮಹಬೂಬ್, ಗೃಹರಕ್ಷಕ ದಳದ ಮಾಜಿ ಸಿಬ್ಬಂದಿ ಆರೀಫ್, ಜೊತೆಗೆ ತೌಸೀಫ್, ಜಾವೀದ್, ಪೀರ, ದಾದಾ ಕಲಂದರ್, ಮುಸ್ತಾಕ್ ಅಲಿ ರೆಹಮಾನ್ ಬಂಧಿತರು. ಆರೋಪಿಗಳಿಂದ ಒಟ್ಟು 22,41,000 ಮೌಲ್ಯದ ಹಣ, ಆಭರಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ. ಕೃ*ತ್ಯದಲ್ಲಿ ಭಾಗಿಯಾಗಿದ್ದ ಕಾನ್ಸ್ಟೇಬಲ್ ಮೆಹಬೂಬ್ ನನ್ನು ಅಮಾನತು ಮಾಡಲಾಗಿದೆ.
ಏನಿದು ಪ್ರಕರಣ?
ರಘು ಎಂಬುವವರು ಸೆ. 12ರಂದು ಮುಂಜಾನೆ 22,99,000 ಹಣ ಮತ್ತು 15,90,000 ಮೌಲ್ಯದ 318 ಗ್ರಾಂ ಚಿನ್ನಾಭರಣಗಳನ್ನು ತಮ್ಮ ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಟ್ಯಾಂಕ್ ಬಾಂಡ್ ರಸ್ತೆ ಕಡೆಯಿಂದ ರಾಯದುರ್ಗ ಬಸ್ ನಿಲ್ದಾಣದ ಕಡೆಯ ಓಣಿಯಲ್ಲಿ ಮನೆಗೆ ತೆರಳುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಇಬ್ಬರು ರಘು ಕಣ್ಣಿಗೆ ಖಾರದಪುಡಿ ಎರಚಿ ದರೋಡೆ ಮಾಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ವಿ.ಜೆ ಮತ್ತು ಬ್ರೂಸ್‌ಪೇಟೆ ಠಾಣೆ ಇನ್ಸ್‌ಪೆಕ್ಟರ್ ಸಿಂಧೂರ್ ತನಿಖೆಗಾಗಿ ನಗರ ಡಿಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಬ್ರೂಸ್‌ಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಎಂ.ಎನ್. ಸಿಂಧೂರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಅದರಂತೆ, ಸೆ. 21ರಂದು ಆರೀಫ್ ಎಂಬಾತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ತೌಸೀಫ್, ಜಾವೀದ್, ಪೀರ, ದಾದಾ ಕಲಂದರ್, ಮುಸ್ತಾಕ್ ಅಲಿ ರೆಹಮಾನ್‌ಎಂಬುವವರೊಂದಿಗೆ ಎರಡು ಬೈಕ್‌ಗಳಲ್ಲಿ ಹೋಗಿ ಹಣ ಮತ್ತು ಬಂಗಾರವುಳ್ಳ ಬ್ಯಾಗ್ ಕಸಿದು ಬಂದಿದ್ದಾಗಿ ವಿಚಾರಣೆ ವೇಳೆ ಆರೀಫ್ ತಿಳಿಸಿದ್ದ. ದರೋಡೆ ಮಾಡಿದ ಹಣ ಮತ್ತು ಆಭರಣವನ್ನು ಆರೀಫ್ ತನ್ನ ತಂಡಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಂಚಿ, 9 ಲಕ್ಷವನ್ನು ತನ್ನ ಆತ್ಮೀಯನಾಗಿದ್ದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮಹಬೂಬ್‌ಗೆ ಆರೀಫ್ ನೀಡಿದ್ದ.ಕದ್ದ ಮಾಲು ಸಾಗಿಸಲು ಆರೀಫ್‌ಗೆ ಮೆಹಬೂಬ್ ವಾಹನದ ವ್ಯವಸ್ಥೆ ಮಾಡಿದ್ದ ಎಂದು ಗೊತ್ತಾಗಿದೆ. ಮೆಹಬೂಬ್ ನಿಂದ 6.90 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಸಿಕ್ಕಿಬಿದ್ದಿದ್ದು ಹೇಗೆ?
ಘಟನೆ ನಡೆಯುತ್ತಲೇ ಪೊಲೀಸರು ಸಿ.ಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ದುಷ್ಕರ್ಮಿಗಳ ಅಸ್ಪಷ್ಟ ಚಹರೆ ಸಿಕ್ಕಿತ್ತು. ಹೀಗಿರುವಾಗಲೇ ದುಷ್ಕರ್ಮಿಗಳ ವರ್ತನೆಯಲ್ಲಿ ಆಗಿದ್ದ ಬದಲಾವಣೆ ಪ್ರಕರಣಕ್ಕೆ ತಿರುವು ಕೊಟ್ಟಿತ್ತು.
ಕುಡಿಯುವುದು ಜನರ ಮೇಲೆ ದಬ್ಬಾಳಿಕೆ ನಡೆಸುವುದು ದರೋಡೆಕೋರರು ಹೆಚ್ಚು ಮಾಡಿದ್ದರು. ಈ ಬಗ್ಗೆ ಪೊಲೀಸರಿಗೆ ಗುಪ್ತ ಮಾಹಿತಿ ರವಾನೆಯಾಗಿತ್ತು. ಇದೇ ಅನುಮಾನದ ಮೇಲೆ ಆರೀಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.