ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯ ಆಸ್ಪತ್ರೆಯ ಆವರಣದ ಕಸದ ತೊಟ್ಟಿಯಲ್ಲಿ ಹೆಣ್ಣು ಭ್ರೂಣ ಪತ್ತೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಸೀಲ್ ಮಾಡಲಾಗಿದ್ದು, ನಾಲ್ವರು ನೌಕರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬಂಧಿತರಲ್ಲಿ ಮಹಿಳಾ ನರ್ಸ್ಗಳೂ ಸೇರಿದ್ದು, ಅವರನ್ನು ಎಫ್ಐಆರ್ನಲ್ಲಿ ಹೆಸರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆರೋಗ್ಯ ಅಧಿಕಾರಿಗಳ ತಂಡ ಬುಧವಾರ ತಮ್ಮ ದಿನನಿತ್ಯದ ತಪಾಸಣೆಯ ಭಾಗವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಹೆಣ್ಣು ಭ್ರೂಣ ಕಂಡು ಅವರು ಆಘಾತಕ್ಕೊಳಗಾಗಿದ್ದಾರೆ. ತಪಾಸಣೆ ವೇಳೆ ಆಪರೇಷನ್ ಥಿಯೇಟರ್ನಲ್ಲಿ ಮಹಿಳೆಯೊಬ್ಬರು ಮಲಗಿರುವುದು ಕಂಡು ಬಂದಿದ್ದು, ಕಸದ ತೊಟ್ಟಿಯಲ್ಲಿ ಎಸೆದಿರುವ ಭ್ರೂಣ ಆಕೆಯದ್ದೇ ಎಂದು ಶಂಕಿಸಿದ್ದಾರೆ.ಆದರೆ, ವಿಚಾರಣೆ ನಡೆಯುತ್ತಿದೆ ಮತ್ತು ಬಿಸಾಡಿದ್ದ ಭ್ರೂಣ ಆಕೆಯದ್ದೋ ಅಥವಾ ಬೇರೆಯವರದೋ ಎಂದು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಆರೋಗ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆಗೆ ಸೀಲ್ ಮಾಡಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ಗರ್ಭಪಾತದ ಮೂಲಕ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದೆ ಎಂದು ರಾಜ್ಯ ಆರೋಗ್ಯ ಆಯುಕ್ತ ಡಿ. ರಂದೀಪ್ ಹೇಳಿದ್ದಾರೆ. ಪೊಲೀಸರು ಭೇದಿಸಿದ ನಂತರ ಅನಧಿಕೃತ ವೈದ್ಯಕೀಯ ಸೌಲಭ್ಯಗಳು ಮತ್ತು ‘ನಕಲಿ ವೈದ್ಯರು’ ನಡೆಸುತ್ತಿರುವ ವೈದ್ಯಕೀಯ ಸೌಲಭ್ಯಗಳನ್ನು ಪರಿಶೀಲಿಸಲು ಮತ್ತು ಸೀಲ್ ಮಾಡಲು ಕರ್ನಾಟಕ ಆರೋಗ್ಯ ಇಲಾಖೆಯು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದೆ. ಬೆಂಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹಗರಣ ಬೆಳಕಿಗೆ ಬಂದ ನಂತರ ಹಲವರನ್ನು ಬಂಧಿಸಲಾಗಿದೆ. ರಾಜ್ಯ ಸರ್ಕಾರ ಇಂತಹ ಕಾನೂನುಬಾಹಿರ ಚಟುವಟಿಕೆಗಳ ತನಿಖೆಯನ್ನು ರಾಜ್ಯ ಪೊಲೀಸ್ನ ಅಪರಾಧ ತನಿಖಾ ವಿಭಾಗಕ್ಕೆ ವರ್ಗಾಯಿಸಿದೆ. ರಾಜ್ಯ ಆರೋಗ್ಯ ಆಯುಕ್ತರು ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ಕ್ಲಿನಿಕ್ಗಳು, ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಪರಿಶೀಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅನಧಿಕೃತ ಹಾಗೂ ನಕಲಿ ವೈದ್ಯರು ನಡೆಸುತ್ತಿರುವುದು ಕಂಡುಬಂದಲ್ಲಿ ಸೀಲ್ ಮಾಡುವಂತೆ ಸೂಚಿಸಿದ್ದಾರೆ.