ನೀವು ಎಸೆಯುವ ಈರುಳ್ಳಿ ಸಿಪ್ಪೆಯಿಂದ ಎಂತಹ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯಾ? ಈರುಳ್ಳಿ ಸಿಪ್ಪೆ ಮನೆಮದ್ದಿನಿಂದ ಹಿಡಿದು, ಸಾವಯವ ಗೊಬ್ಬರಕ್ಕೂ ಬಳಕೆಯಾಗುವುದು.
ಈರುಳ್ಳಿ, ಪ್ರತಿಯೊಂದು ಆಹಾರ ತಯಾರಿಸುವಾಗಲೂ ಬಳಸುವ ವಸ್ತು. ನಮ್ಮ ದೇಶದ ಆಹಾರ ಪದ್ಧತಿಯಲ್ಲಿ ಈ ಈರುಳ್ಳಿ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಆದರೆ ಈರುಳ್ಳಿ ಬಳಸುವಾಗ ಅದರ ಸಿಪ್ಪೆ ಎಸೆಯುವುದು ವಾಡಿಕೆ. ಆದರೆ ನೀವು ಎಸೆಯುವ ಈರುಳ್ಳಿ ಸಿಪ್ಪೆಯಿಂದ ಎಂತಹ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯಾ? ಹೌದು, ಈರುಳ್ಳಿ ಸಿಪ್ಪೆ ಮನೆಮದ್ದಿನಿಂದ ಹಿಡಿದು, ಸಾವಯವ ಗೊಬ್ಬರಕ್ಕೂ ಬಳಕೆಯಾಗುವುದು. ಹಾಗಾದರೆ ಇದರ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೋಡೋಣ.
ಈರುಳ್ಳಿ ಸಿಪ್ಪೆಯ ಲಾಭಗಳನ್ನು ಈ ಕೆಳಗೆ ವಿವರಿಸಲಾಗಿದೆ:
ಬಿಳಿ ಕೂದಲಿಗೆ ಅತ್ಯುತ್ತಮ ಮದ್ದು: ಈರುಳ್ಳಿಯ ಸಿಪ್ಪೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಕೂದಲಿನ ಬಿಳಿ ಬಣ್ಣವನ್ನು ಹೋಗಲಾಡಿಸುತ್ತದೆ. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ. ಕೇವಲ 2-3 ಮಧ್ಯಮ ಈರುಳ್ಳಿ ತೆಗೆದುಕೊಂಡು ಸಿಪ್ಪೆಗಳನ್ನು ತಟ್ಟೆಯಲ್ಲಿ ಇರಿಸಿ. ನೈಸರ್ಗಿಕವಾಗಿ ಕೂದಲಿಗೆ ಬಣ್ಣ ಹಾಕಲು, ಮೊದಲಿಗೆ ಕಬ್ಬಿಣದ ಪ್ಯಾನ್ ತೆಗೆದುಕೊಳ್ಳಿ, ಅದನ್ನು ಮೀಡಿಯಂ ಫ್ಲೇಮ್ ನಲ್ಲಿ ಬಿಸಿ ಮಾಡಿ. ನಂತರ ಇದಕ್ಕೆ ಈರುಳ್ಳಿ ಸಿಪ್ಪೆಗಳನ್ನು ಹಾಕಿ, ಸಿಪ್ಪೆಗಳು ಸುಟ್ಟು ಕಪ್ಪು ಬಣ್ಣಕ್ಕೆ ಬರುವವರೆಗೆ ಬಿಸಿ ಮಾಡಿ. ನಂತರ ಆಫ್ ಮಾಡಿ. ಸಿಪ್ಪೆಯನ್ನು ನಯವಾಗಿ ಪುಡಿಮಾಡಿ, ಜರಡಿ ಮೂಲಕ ಸೋಸಿ. ನೀವು ಈ ಪುಡಿಯನ್ನು ಅಲೋವೆರಾ ಜೆಲ್ ಅಥವಾ ಕೂದಲಿನ ಎಣ್ಣೆಯೊಂದಿಗೆ ಬೆರೆಸಿ ನಂತರ ಕೂದಲಿಗೆ ಹಚ್ಚಬಹುದು. ಈ ಫಟಾ ಫಟ್ ಹೇರ್ ಡೈ ಕೂದಲಿಗೆ ಉತ್ತಮ ಬಣ್ಣ ಕೊಡುತ್ತದೆ. ಆದರೆ ನೆನಪಿಡಿ ಒಂದು ಅಥವಾ ಎರಡು ಬಾರಿ ಕೂದಲನ್ನು ತೊಳೆದ ನಂತರ ಈ ಡೈ ಮಸುಕಾಗಬಹುದು.
ಅತ್ಯುತ್ತಮ ಹೇರ್ ಟೋನರ್: ನೀವು ಮಂದ, ಒಣ ಕೂದಲು ಅಥವಾ ಅತಿಯಾದ ಕೂದಲು ಉದುರುವಿಕೆಯಿಂದ ಬೇಸತ್ತಿದ್ದರೆ, ಈರುಳ್ಳಿ ಸಿಪ್ಪೆಯಿಂದ ತಯಾರಿಸಿದ ಮನೆಯಲ್ಲಿ ಮಾಡಿದ ಈ ಹೇರ್ ಟೋನರ್ ನಿಮ್ಮ ಕೂದಲಿಗೆ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ. ಈರುಳ್ಳಿ ಗಂಧಕದಿಂದ ತುಂಬಿದ್ದು, ಕೂದಲು ಉದುರುವುದನ್ನು ತಡೆಯುತ್ತದೆ. ಈ ತ್ವರಿತ ಹೇರ್ ಟೋನರ್ ಮಾಡಲು ನಿಮಗೆ ಸ್ವಲ್ಪ ಈರುಳ್ಳಿ ಸಿಪ್ಪೆಗಳು ಬೇಕಾಗುತ್ತವೆ, ಅವುಗಳನ್ನು ನೀರಿನಲ್ಲಿ ಕುದಿಸಿ, ಮಿಶ್ರಣವು ಕಂದು ಬಣ್ಣಕ್ಕೆ ತಿರುಗಿದ ನಂತರ, ಉರಿಯನ್ನು ಆಫ್ ಮಾಡಿ. ನಂತರ ಬಾಟಲಿಯಲ್ಲಿ ಹಾಕಿ, ಇದನ್ನು ನಿಮ್ಮ ನೆತ್ತಿಯ ಮೇಲೆ ಬಳಸಿ ಮತ್ತು ಒಳ್ಳೆಯ ಬದಲಾವಣೆ ನೋಡಿ.
ನೋವು ನಿವಾರಣೆಗೆ ಈರುಳ್ಳಿ ಟೀ: ನೀವು ಸ್ನಾಯು ಸೆಳೆತ ಅಥವಾ ನೋವು ಅಥವಾ ದೇಹದ ನೋವನ್ನು ಎದುರಿಸುತ್ತಿದ್ದರೆ, ಈರುಳ್ಳಿ ಸಿಪ್ಪೆಯ ಚಹಾವನ್ನು ಕುಡಿಯುವುದರಿಂದ ನಿಮ್ಮ ನೋವು ಗುಣವಾಗಲು ಸಹಾಯ ಆಗುವುದು. ನೀರಿನಲ್ಲಿ ಕೆಲವು ಈರುಳ್ಳಿ ಸಿಪ್ಪೆಗಳನ್ನು ಕುದಿಸಿ, ಸೋಸಿ. ಮಲಗುವ ಮುನ್ನ ಈ ಚಹಾವನ್ನು ಕುಡಿಯಿರಿ, ಇದು ಸ್ನಾಯುಗಳ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ನಿದ್ರೆಗೆ ಸಹಕಾರಿ: ಹೌದು, ಈರುಳ್ಳಿ ಸಿಪ್ಪೆಗಳನ್ನು ಹಾಕಿ ಸಿಂಪಲ್ ಆಗಿ ಚಹಾವನ್ನು ತಯಾರಿಸುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ. ಈರುಳ್ಳಿ ಸಿಪ್ಪೆಯು ನೈಸರ್ಗಿಕ ನಿದ್ರಾಜನಕದಂತೆ ಕಾರ್ಯನಿರ್ವಹಿಸುವ ಅಮೈನೊ ಆಮ್ಲದ ಒಂದು ರೂಪವಾದ ಎಲ್-ಟ್ರಿಪ್ಟೊಫಾನ್’ನಿಂದ ಕೂಡಿದ್ದು, ಈರುಳ್ಳಿ ಸಿಪ್ಪೆಗಳಿಂದ ತಯಾರಿಸಿದ ಈ ಚಹಾವು ನಿದ್ರೆಯನ್ನು ಪ್ರಚೋದಿಸಲು ಮತ್ತು ನಿಮ್ಮ ನರಗಳನ್ನು ಶಾಂತಿವಾಗಿಡಲು ಸಹಾಯ ಮಾಡುತ್ತದೆ.
ಅಡುಗೆಗೆ ಒಳ್ಳೆಯ ಪರಿಮಳ: ಈರುಳ್ಳಿ ಸಿಪ್ಪೆಗಳು ವಿಶೇಷ ಪರಿಮಳವನ್ನು ಹೊಂದಿರುತ್ತವೆ. ಆದ್ದರಿಂದ ಒಣಗಿದ / ಹುರಿದ ಈರುಳ್ಳಿ ಸಿಪ್ಪೆ ಪುಡಿಯನ್ನು ನಿಮ್ಮ ಅಡುಗೆಗೆ ಸೇರಿಸುವುದರಿಂದ ನಿಮ್ಮ ಸೂಪ್, ಸ್ಟ್ಯೂ ಮತ್ತು ಮನೆಯಲ್ಲಿ ತಯಾರಿಸಿದ ಬ್ರೆಡ್’ಗಳ ಪರಿಮಳ ಹೆಚ್ಚುತ್ತದೆ.
ಗಿಡಗಳಿಗೆ ನೈಸರ್ಗಿಕ ಗೊಬ್ಬರ: ಈರುಳ್ಳಿ ಸಿಪ್ಪೆಗಳನ್ನು ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ, ಅದನ್ನು ನೈಸರ್ಗಿಕ ಮಿಶ್ರಗೊಬ್ಬರವಾಗಿ ಪರಿವರ್ತಿಸಿ. ಇದು ಪೋಷಕಾಂಶಗಳಿಂದ ತುಂಬಿರುತ್ತದೆ, ಮನೆಯಲ್ಲಿ ತಯಾರಿಸಿದ ಈ ಮಿಶ್ರಗೊಬ್ಬರವನ್ನು ಗಿಡಗಳಿಗೆ ಸೇರಿಸುವುದರಿಂದ ನಿಮ್ಮ ಸಸ್ಯಗಳ ಬೆಳವಣಿಗೆಗೆ ಸಹಾಯವಾಗುತ್ತದೆ.