‘ಕಾಂಗ್ರೆಸ್‌‌ಗೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ’? -ಎಚ್‌ಡಿಕೆ ವಾಗ್ದಾಳಿ

ಬೆಂಗಳೂರು: ಆರು ತಿಂಗಳಲ್ಲಿ 251 ಅನ್ನದಾತರ ಆತ್ಮಹತ್ಯೆ ಆಗಿದೆ ಎಂದು ಇಂದು ಬೆಳ್ಳಂ ಬೆಳಗ್ಗೆಯೇ ಈ ವರದಿ ಓದಿದಾಕ್ಷಣ ಬಹಳ ಸಂಕಟವಾಯಿತು, ಕಣ್ಣಾಲಿಗಳು ತುಂಬಿ ಬಂದವು. ಇನ್ನೆಷ್ಟು ದಿನ ಇಂತಹ ಸಾವುಗಳನ್ನು ನೋಡಬೇಕು. ಕೇವಲ ಪ್ರಚಾರ, ಅಧಿಕಾರದ ಸುಖ ಅನುಭವಿಸುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ? ಇವರಿಗೆ ವಾಸ್ತವ ಅರಿವಿಲ್ಲವೆ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಗ್ಯಾರಂಟಿಗಳನ್ನು ಕೊಟ್ಟೆವೆಂದು ಬೀಗುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ? ಇದೇನಾ ‘ಕರ್ನಾಟಕ ಮಾದರಿ’? ರಾಜ್ಯದಲ್ಲಿ ಕೃಷಿ ಇಲಾಖೆ ಎನ್ನುವುದು ಇದೆಯಾ? ಅದು ಕೃಷಿ ಇಲಾಖೆಯಾ, ಕಸಾಯಿಖಾನೆಯಾ? ಕಂದಾಯಕ್ಕೂ ಆದಾಯದ ಚಿಂತೆಯಾ? ರಾಜ್ಯಕ್ಕೆ ಬರ, ಕೆಲವರಿಗೆ ಅದೇ ವರ..!! ಇದು ನೈಜಸ್ಥಿತಿ ಎಂದಿದ್ದಾರೆ.

ಆಗಸ್ಟ್, ಸೆಪ್ಟೆಂಬರ್ ನಲ್ಲಿ ಕೆಲವೆಡೆ ಮಳೆಯಾದರೂ ಪ್ರಯೋಜನವಾಗಿಲ್ಲ. ಆಗ್ಗೆ ಬೆಳೆಗಳು ನಾಶವಾಗಿವೆ. ತುರ್ತಾಗಿ ಕೇಂದ್ರಕ್ಕೆ ಮನವಿ ಮಾಡಬೇಕಿದ್ದ ಸರಕಾರ ಮಾರ್ಗಸೂಚಿ ನೆಪದಲ್ಲಿ ಕಾಲಹರಣ ಮಾಡುತ್ತಿದೆ. ಕಾಲಹರಣವೂ ಜೀವಹರಣವೂ ಬೇರೆ ಬೇರೆ ಅಲ್ಲ. ತುರ್ತಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣ ಬಿಡುಗಡೆ ಮಾಡಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Advertisement

ಇನ್ನು ಬೆಳೆ ವಿಮೆಯೂ ಅನ್ನದಾತರ ಆಪತ್ತಿಗೆ ಆಗುತ್ತಿಲ್ಲ,ಅದರ ಬಗ್ಗೆ ಅವರಿಗೆ ವಿಶ್ವಾಸವೇ ಇಲ್ಲ. ಅವರು ಸಾವಿನ ದವಡೆಗೆ ಬೀಳುತ್ತಿದ್ದರೆ ಅಧಿಕಾರಿಗಳು ಅರ್ಹ-ಅನರ್ಹ ಸಾವು(!!) ಎಂದು ವಿಭಜಿಸಿ ಲೆಕ್ಕ ಹಾಕಿಕೊಂಡು ಕೂತಿದ್ದಾರೆ.ಸಾವಿನಲ್ಲೂ ಅರ್ಹತೆ, ಅನರ್ಹತೆ ಹುಡುಕುವ ಈ ಕ್ರೂರತೆಗೆ ಏನೆಂದು ಹೇಳುವುದು? ರೈತರ ಸಾವುಗಳೆಂದರೆ ಇವರಿಗೆ ಇಷ್ಟು ಹಗುರವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮನವಿ ಇಷ್ಟೇ; ರೈತರು ಎದೆಗುಂದಬಾರದು. ನಿಮ್ಮ ದುಡುಕಿನ ನಿರ್ಧಾರ ನಿಮ್ಮ ಕುಟುಂಬವನ್ನು ಅನಾಥಗೊಳಿಸುತ್ತದೆ, ನಿಮ್ಮೊಂದಿಗೆ ನಾನಿದ್ದೇನೆ. ಸರಕಾರ ಇಂಥಹ ಆತ್ಮಹತ್ಯೆ ಪ್ರಕರಣಗಳಿಗೆ ಇತಿಶ್ರೀ ಹಾಡಲೇಬೇಕು. ಶಾಶ್ವತವಾಗಿ ಪರಿಹಾರೋಪಾಯ ಕಂಡುಕೊಳ್ಳಬೇಕು. ಜೀವಬಿಟ್ಟ ರೈತ ಕುಟುಂಬಗಳಿಗೆ ಮಾನವೀಯತೆಯ ನೆರವು ಕೊಡಬೇಕು. ವಿಳಂಬ ಸರಿಯಲ್ಲ ಎಂದು ಹೇಳಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement