ನವದೆಹಲಿ: ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದ ಗೌರವ್ ವಲ್ಲಭ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷದ ನಾಯಕ ವಿನೋದ್ ತಾವ್ಡೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅವರಿಗೆ ಪಕ್ಷದ ಸದಸ್ಯತ್ವವನ್ನು ನೀಡಿದರು.ಬಿಹಾರದ ಕಾಂಗ್ರೆಸ್ ನಾಯಕ ಅನಿಲ್ ಶರ್ಮಾ ಹಾಗೂ ಆರ್ಜೆಡಿ ನಾಯಕ ಉಪೇಂದ್ರ ಪ್ರಸಾದ್ ಕೂಡ ಬಿಜೆಪಿ ಸೇರಿದ್ದಾರೆ. ಗೌರವ್ ವಲ್ಲಭ್ ಪಕ್ಷದ ಹಿರಿಯ ನಾಯಕ ಹಾಗೂ ವಕ್ತಾರ ಕೂಡ ಆಗಿದ್ದರು, ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ಸೇರ್ಪಡೆ ಮುನ್ನ ಗೌರವ್ ವಲ್ಲಭ್ ಮಾತನಾಡಿ, ನಾನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದೇನೆ ಅದರಲ್ಲಿ ನನ್ನ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದಾರೆ. ನಾನು ಅರ್ಥಶಾಸ್ತ್ರದ ವಿದ್ಯಾರ್ಥಿ, ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯಗಳನ್ನು ದೀರ್ಘಕಾಲ ಕಲಿತಿದ್ದೇನೆ ಎಂದರು.
ಸನಾತನ ಧರ್ಮ ದುರ್ಬಳಕೆಯಾದಾಗ ಸುಮ್ಮನಿರಲು ನಮ್ಮಿಂದ ಸಾಧ್ಯವಿಲ್ಲ, ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ನಮ್ಮ ಸಾಮರ್ಥ್ಯ ಮತ್ತು ಜ್ಞಾನವನ್ನು ಭಾರತವನ್ನು ಮುನ್ನಡೆಸಲು ಬಳಸುತ್ತೇನೆ ಎಂದಿದ್ದಾರೆ.ಕಾಂಗ್ರೆಸ್ ಪಕ್ಷ ದಾರಿ ತಪ್ಪಿದೆ ಎಂದು ಗೌರವ್ ವಲ್ಲಭ್ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪಕ್ಷದಲ್ಲಿ ಸರಿಯಾದ ನಿಲುವು ತಳೆಯಲು ಸಾಧ್ಯವಾಗುತ್ತಿಲ್ಲ ಎಂದರು. ಬುದ್ಧಿಜೀವಿಗಳು, ಹೊಸ ವಿಚಾರಗಳನ್ನು ಹೊಂದಿರುವ ಯುವಕರಿಗೆ ಪಕ್ಷದಲ್ಲಿ ಮನ್ನಣೆ ಸಿಗುತ್ತಿಲ್ಲ. ಪಕ್ಷ ತಳಮಟ್ಟದಲ್ಲಿ ಯಾರೊಂದಿಗೂ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.