ತೆಲಂಗಾಣ: ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ೫ ಗ್ಯಾರಂಟಿ ಘೋಷಿಸಿ ಭರ್ಜರಿ ಗೆಲುವು ಸಾಧಿಸಿ ಬಿಜೆಪಿಗೆ ಶಾಕ್ ನೀಡಿದ್ದ ಕಾಂಗ್ರೆಸ್ ಈಗ ಮತ್ತೊಂದು ಭರ್ಜರಿ ತಂತ್ರ ರೂಪಿಸಿದೆ. ಈ ಸಲ ಅತ್ತೆಗೆ 4 ಸಾವಿರ, ಸೊಸೆಗೆ ಎರಡೂವರೆ ಸಾವಿರ ಗ್ಯಾರಂಟಿ ಘೋಷಿಸಿದೆ. ಮಾತ್ರವಲ್ಲ ಗೃಹಿಣಿಯರ ಓಲೈಕೆಗೆ ಮುಂದಾಗಿರುವ ಕಾಂಗ್ರೆಸ್ 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್ ಎನ್ನುವ ಘೋಷಣೆಯನ್ನೂ ಘೋಷಿಸಿದೆ. ಅಂದ ಹಾಗೆ ಈ ಘೋಷಣೆಯನ್ನೆಲ್ಲ ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲೂ ಪ್ರಯೋಗಿಸುತ್ತಿದೆ.
ತೆಲಂಗಾಣಕ್ಕೆ ಆರು ಗ್ಯಾರಂಟಿ’ಗಳನ್ನು ಘೋಷಿಸಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ನೀಡಿದ್ದ ಭರವಸೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದನ್ನು ಮತದಾರರ ಮುಂದಿಡಲು ಪ್ರಯತ್ನಿಸುತ್ತಿದೆ. ಕರ್ನಾಟಕ ಮಾದರಿಯನ್ನು ಉತ್ತೇಜಿಸುವ ಭಾಗವಾಗಿ ಕಾಂಗ್ರೆಸ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನೆರೆಯ ರಾಜ್ಯದ ಕೆಲವು ನಾಯಕರೊಂದಿಗೆ ಹಲವಾರು ಸಭೆಗಳು, ರೋಡ್ ಶೋಗಳನ್ನು ಯೋಜಿಸಿದೆ. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಆರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಕಾಮಾರೆಡ್ಡಿ ಕ್ಷೇತ್ರದಲ್ಲಿ ರೇವಂತ್ ರೆಡ್ಡಿ ಪರ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದ್ರು. ಸಿಎಂ ಕೆಸಿಆರ್ ವಿರುದ್ಧ ರೇವಂತ್ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲಾಗುತ್ತೆ ಎಂಬ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದರು. ಕೆಸಿಆರ್ ಕರ್ನಾಟಕಕ್ಕೆ ಬಂದು ಗ್ಯಾರಂಟಿಗಳ ಜಾರಿಯನ್ನು ನೋಡಲಿ ಎಂದು ಸವಾಲ್ ಹಾಕಿದ್ರು.
ತೆಲಂಗಾಣದಲ್ಲಿ ಕಾಂಗ್ರೆಸ್ ನ ಆರು ಗ್ಯಾರಂಟಿ ಹೀಗಿದೆ
ಗ್ಯಾರಂಟಿ 1 – ಪ್ರತಿ ತಿಂಗಳು ಅತ್ತೆಗೆ 4,000 ರೂ., ಸೊಸೆಗೆ 2,500 ರೂ. ಗ್ಯಾರಂಟಿ 2 – ಪ್ರತಿ ಹೆಣ್ಣುಮಗುವಿನ ಖಾತೆಗೆ ಪ್ರತಿ ತಿಂಗಳು 2,500 ರೂ. (ಮಹಾಲಕ್ಷ್ಮಿ ಯೋಜನೆ) ಗ್ಯಾರಂಟಿ 3 – ಪಿಂಚಣಿ ಮೊತ್ತ 2,000 ರೂ.ನಿಂದ 4,000 ರೂ.ಗೆ ಹೆಚ್ಚಳ ಗ್ಯಾರಂಟಿ 4 – 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್ ಗ್ಯಾರಂಟಿ 5 – ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು ಗ್ಯಾರಂಟಿ 6 – ಬಡವರಿಗೆ 200 ಯೂನಿಟ್‍ವರೆಗೂ ಉಚಿತ ವಿದ್ಯುತ್