ಭೋಪಾಲ್: ಕಾಂಗ್ರೆಸ್ ಪಕ್ಷದ ಹಿಡನ್ ಅಜೆಂಡಾ ಈಗ ಹೊರಬಿದ್ದಿದೆ. ಪಿತ್ರಾರ್ಜಿತ ಆಸ್ತಿಗೆ ತೆರಿಗೆ ವಿಧಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಇದರಿಂದ ಹಿರಿಯರು ಮಾಡಿದ ಆಸ್ತಿಯಲ್ಲಿ ಈಗಿನ ಪೀಳಿಗೆಯವರು ಅರ್ಧದಷ್ಟು ಕಳೆದುಕೊಳ್ಳುವ ಸಂದರ್ಭ ಎದುರಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದ ಸಾಗರ್‌ನಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಪಿತ್ರಾರ್ಜಿತ ಆಸ್ತಿಗೆ ತೆರಿಗೆ ವಿಧಿಸಲು ಬಯಸಿರುವ ಕಾಂಗ್ರೆಸ್‌ಗೆ ಭಾರತದ ಕೌಟುಂಬಿಕ ಮೌಲ್ಯಗಳ ಬಗ್ಗೆ ತಿಳಿವಳಿಕೆ ಇಲ್ಲ. ನಮ್ಮ ಹಿರಿಯರು ಯಾವುದೇ ದುಂದುವೆಚ್ಚ ಮಾಡದೇ ಮಕ್ಕಳಿಗೆ, ಮೊಮ್ಮಕ್ಕಳ ಭವಿಷ್ಯಕ್ಕಾಗಿ ಆಸ್ತಿ ಮಾಡಿ ಇಡುತ್ತಿದ್ದರು. ಅದಕ್ಕಾಗಿ ಅವರು ತ್ಯಾಗದ ಜೀವನ ಸವೆಸಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿರಿಯರು ಮಾಡಿಟ್ಟ ಆಸ್ತಿಯ ಅರ್ಧದಷ್ಟು ಪಾಲು ತೆರಿಗೆ ಭರಿಸಬೇಕಾಗುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.