ಲಕ್ನೋ: ತಮ್ಮ ಪಕ್ಷವೂ ತಪ್ಪುಗಳನ್ನು ಮಾಡಿದೆ ಮತ್ತು ಭವಿಷ್ಯದಲ್ಲಿ ಪಕ್ಷದ ರಾಜಕಾರಣದಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆ ನೀಡಿದ ಅವರು, ನರೇಂದ್ರ ಮೋದಿಯೂ ರಾಜನಂತೆ ವರ್ತಿಸುತ್ತಿದ್ದಾರೆಯೇ ಹೊರತು ಪ್ರಧಾನಿಯಂತಲ್ಲ ಎಂದು ಆರೋಪಿಸಿದ್ದಾರೆ.
ಕನ್ನೌಜ್ ನಲ್ಲಿ ಸಂವಿಧಾನಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ತಾವು ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ನಡೆಸಲು ತಾನು 100 ಪ್ರತಿಶತ ಸಿದ್ಧನಿದ್ದೇನೆ, ಆದರೆ ಇದಕ್ಕೆ ಪ್ರಧಾನಿ ಒಪ್ಪುವುದಿಲ್ಲ ಒಪ್ಪುವುದಿಲ್ಲ ಎಂದೂ ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೂ ತನ್ನ ರಾಜಕೀಯವನ್ನು ಬದಲಾಯಿಸಬೇಕಾಗಿದೆ. ಇದನ್ನು ಮಾಡಬೇಕಾಗಿದೆ. ಕಾಂಗ್ರೆಸ್ ಪಕ್ಷವೂ ತಪ್ಪು ಮಾಡಿದೆ ಎಂದು ನಾನು ಹೇಳಬಯಸುತ್ತೇನೆ ಮತ್ತು ನಾನು ಕಾಂಗ್ರೆಸ್ ಪಕ್ಷದವನಾಗಿದ್ದುಕೊಂಡು ಇದನ್ನು ಹೇಳುತ್ತಿದ್ದೇನೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿಯ ಬದಲಾವಣೆ ಅಗತ್ಯವಿದೆ ಎಂಬುದನ್ನು ಅವರು ವಿವರಿಸಿಲ್ಲ. ಸಮೃದ್ಧ ಭಾರತ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ ‘ಸಂವಿಧಾನ ಸಮ್ಮೇಳನ’ದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
“ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ನೀವು ಬಯಸಿದರೆ ನಾನು ನಿಮಗೆ ಲಿಖಿತವಾಗಿ ನೀಡಬಲ್ಲೆ” ಎಂದು ಅವರು ಉತ್ತರ ಪ್ರದೇಶದಲ್ಲಿ ಹಿಂದಿನ ದಿನ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ರ್ಯಾಲಿಯಲ್ಲಿ ನುಡಿದ ಭವಿಷ್ಯವನ್ನು ಪುನರಾವರ್ತಿಸಿದರು.