ಬೆಂಗಳೂರು: ಕಾಂಗ್ರೆಸ್‌ನವರು ಲೋಕಸಭಾ ಚುನಾವಣಾ ನಡೆಯುತ್ತಿದೆ ಎನ್ನುವುದನ್ನು ಮರೆತು ಹೋದಂತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರು ಯಾರೂ ಹೇಳುತ್ತಿಲ್ಲ. ಕಾಂಗ್ರೆಸ್ ಜನರ ದಾರಿ ತಪ್ಪಿಸಿ ವಿವಾದ ಸೃಷ್ಟಿಸುತ್ತಿದೆ. ಆದರೆ, ನಾವು ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಸಾಧನೆ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ ಅವರು, ‘ಎರಡು ಕೋಟಿ ಉದ್ಯೋಗ ಕೊಟ್ಟರಾ? ಅಂತ ಕೇಳೋ ಕಾಂಗ್ರೆಸ್‌ನವರಿಗೆ ಹೇಳುವುದೇನೆಂದರೆ ಇಲ್ಲಿಯವರೆಗೆ ಏಳು ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಬೆಂಗಳೂರಿನ ಹೆಚ್‌ಎಎಲ್ 29 ಸಾವಿರ ಕೋಟಿ ಆದಾಯ ಗಳಿಸಿದೆ. ಹೆಚ್‌ಎಎಲ್ ಮುಚ್ಚುತ್ತಾರೆ ಅಂತಿದ್ದ ರಾಹುಲ್ ಕ್ಷಮೆ ಕೇಳ್ತಾರಾ’ ಎಂದು ಪ್ರಶ್ನಿಸಿದರು. ಕಳೆದ ಹತ್ತು ತಿಂಗಳಲ್ಲಿ ಕಾಂಗ್ರೆಸ್ ಒಂದೇ ಒಂದು ಉದ್ಯೋಗ ನೀಡದಿರೋದು ಒಂದು ದಾಖಲೆ. ಕಲಬುರಗಿ, ಬೀದರ್ ರೈಲು ಮಾರ್ಗ ಮೋದಿ ಅವರ ಆಡಳಿತದ ಅವಧಿಯಲ್ಲಿ ಪೂರ್ಣಗೊಂಡಿದೆ. ಆರು ಒಂದೇ ಭಾರತ ರೈಲು ಸೇವೆ ದೊರೆತಿದೆ. ಕಳೆದ ನಾಲ್ಕು ವರ್ಷಗಳಿಂದ ಉಚಿತ ಅಕ್ಕಿ ಕೇಂದ್ರ ನೀಡುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ನಾಲ್ಕು ಸಾವಿರ ಕೊಡೋದನ್ನು ಕಾಂಗ್ರೆಸ್ ನಿಲ್ಲಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡಿಲ್ಲ. ಮೋದಿ ಅವರು ಒಂದು ಬಾರಿ ಗ್ಯಾರಂಟಿ ನೀಡಿದರೆ ಅದು ಶಾಶ್ವತ. ಕಾಂಗ್ರೆಸ್ ಕೊಡುವ ವೋಟು ಭ್ರಷ್ಟಾಚಾರಕ್ಕೆ ನೀಡುವ , ಅಭದ್ರತೆಗೆ ಕೊಡುವ ಮತವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.