ಕೊಪ್ಪಳ: “ಕಾಂಗ್ರೆಸ್ ನವರಲ್ಲಿ ಹಿಂದೂ ವಿರೋಧಿ ಡಿಎನ್ಎ ಮನೋಭಾವ ಇದೆ. ಹಿಂದೂ ಕಾರ್ಯಕರ್ತರಲ್ಲಿ ಭಯ ಹುಟ್ಟಿಸುವ ಪ್ರಯತ್ನವಾಗುತ್ತಿದೆ. ನಿಮ್ಮ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ಶ್ರೀಕಾಂತ್ ಪೂಜಾರಿ ಅತ್ಯಾಚಾರ ಅಥವಾ ಕಳ್ಳತನ ಮಾಡಿದ್ದಾನಾ? ಆತನನ್ನು 31 ವರ್ಷಗಳಾದ ಮೇಲೆ ಬಂಧಿಸುವುದು ಏಷ್ಟು ಸರಿ” ಎಂದು ಮಾಜಿ ಸಚಿವ ಮಾಜಿ ಸಚಿವ ಸಿ.ಟಿ ರವಿ ಪ್ರಶ್ನಿಸಿದ್ದಾರೆ.
‘ನಾನೂ ಕರಸೇವಕ, ನನ್ನನ್ನೂ ಬಂಧಿಸಿ’ ಎಂದು ಪ್ರತಿಭಟನೆ ಮಾಡುತ್ತಿದ್ದ, ಸಿ.ಟಿ ರವಿ ಅವರ ವಿರುದ್ಧ ಕಾಂಗ್ರೆಸ್, ‘ಅಪಘಾತ’ದ ವಿಚಾರವಾಗಿ ಟೀಕೆ ಮಾಡಿರುವ ವಿಚಾರದ ಬಗ್ಗೆ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಕೇಸ್ ನ ಸಿಸಿ ಕ್ಯಾಮರಾ ಪರಿಶೀಲನೆ ಮಾಡಬೇಕು. ಸರ್ಕಾರ ಸುಳ್ಳುಗಳನ್ನು ಪತ್ತೆ ಮಾಡುವಂತಹ ಫ್ಯಾಕ್ಟ್ ಚೆಕ್ ತಂಡಕ್ಕೆ ವಹಿಸಬೇಕು. ನನ್ನ ಕಾರಿನ ಅಪಘಾತದ ಹಿನ್ನೆಲೆ ಕಾಂಗ್ರೆಸ್ ಪೋಸ್ಟ್ ಚೆಕ್ ಮಾಡಬೇಕು. ಇದು ಸುಳ್ಳಾದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇನೆ” ಎಂದು ಕಾಂಗ್ರೆಸ್ ವಿರುದ್ಧ ಅವರು ಕಿಡಿಕಾರಿದ್ದಾರೆ.
ಇನ್ನು ದೇಶದ ಕಾನೂನು ಎಲ್ಲರಿಗೂ ಒಂದೇ ಎಂಬ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, “ಈಗ ನಿಮಗೆ ಜ್ಞಾನೋದಯವಾಯಿತಾ? ಡಿ ಕೆ ಶಿವಕುಮಾರ್ ವಿರುದ್ಧ ಕೇಸ್ ದಾಖಲು ಮಾಡಿದ್ದಾಗ ಯಾಕೆ ರಾಜ್ಯದಾದ್ಯಂತ ಹೋರಾಟ ನಡೆಸಿದಿರಿ” ಎಂದು ಕಿಡಿಕಾರಿದರು.