ಚಿಕ್ಕಬಳ್ಳಾಪುರ : ಕಳೆದ ವಿಧಾನಸಭೆ ಚುನಾವಣೆಯಲ್ಲಿಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಾ.ಕೆ.ಸುಧಾಕರ್ 10,642 ಮತಗಳ ಅಂತರದಿಂದ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ವಿರುದ್ಧ ಸೋತಿದ್ದರು.
ಈ ವಿಚಾರವಾಗಿ ‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತವನ್ನು ಡಾ.ಕೆ.ಸುಧಾಕರ್ ಹೆಚ್ಚು ಪಡೆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮತ್ತು ಮತದಾನದ ನಂತರವೂ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದರು. ಸದ್ಯ ಸುಧಾಕರ್ ೨೦ ಸಾವಿರ ಲೀಡ್‌ನಲ್ಲಿ ಗೆದ್ದಿದ್ದಾರೆ. ಸದ್ಯ ಪ್ರದೀಪ್ ಮಾತುಗಳು ತೀವ್ರ ಟ್ರೋಲ್‌ಗೆ ಗುರಿಯಾಗಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ‘ಪ್ರದೀಪ್ ರಾಜೀನಾಮೆ ಯಾವಾಗ’ ಎಂದು ಪ್ರಶ್ನಿಸುತ್ತಿದ್ದಾರೆ.
ಈ ನಡುವೆ ಪ್ರದೀಪ್ ಈಶ್ವರ್ ಅಯ್ಯರ್ ಪಿ.ಇ, ಶಾಸಕರು, ಕರ್ನಾಟಕ ವಿಧಾನಸಭೆ ಎನ್ನುವ ರಾಜೀನಾಮೆ ಪತ್ರವು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಈ ಪತ್ರವು ಅಸಲಿಯೊ ನಕಲಿಯೊ ಎನ್ನುವ ಬಗ್ಗೆ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಚರ್ಚೆಗಳು ಸಹ ನಡೆದವು. ‘ಇದು ನಕಲಿ ರಾಜೀನಾಮೆ ಪತ್ರ’ ಎಂದು ಶಾಸಕ ಆಪ್ತ ಸಹಾಯಕರು ‘ಎಂಎಲ್‌ಇ ಮಿಡಿಯಾ ಗ್ರೂಪ್’ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಪತ್ರದಲ್ಲಿ ಏನಿದೆ?.. ಪತ್ರದಲ್ಲಿ ಇವರಿಗೆ ಎಂದು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರ ಹೆಸರು ಉಲ್ಲೇಖಿಸಲಾಗಿದೆ. ” ಕೊಟ್ಟ ಮಾತನ್ನು ಇಟ್ಟು ಹೆಜ್ಜೆ ತಪ್ಪಬಾರದು ಎಂಬ ನಿಯಮವನ್ನು ಜೀವನ ಉದ್ದಕ್ಕೂ ಪಾಲಿಸಿಕೊಂಡು ಬಂದವನು ನಾನು. ಸುಧಾಕರ್ ಅವರಿಗೆ ಸವಾಲು ಹಾಕಿದ್ದೆ. ಈ ಹಿಂದೆ ಆಡಿದ ಮಾತಿಗೆ ಬದ್ಧನಾಗಿ ರಾಜೀನಾಮೆ ನೀಡುತ್ತೇನೆ ” ಎಂದು ಪ್ರದೀಪ್ ಈಶ್ವರ್ ಅವರ ಸಹಿ ಇದೆ. ಸುಧಾಕರ್ ಅವರು ಸುಮಾರು 20 ಸಾವಿರ ಮತಗಳನ್ನು ನನ್ನ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿರುವುದರಿಂದ ನಾನು ಆಡಿದ ಮಾತಿಗೆ ಬದ್ಧನಾಗಿ ಸ್ವಿಇಚ್ಛೆಯಿಂದ ನನ್ನ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ’ ಎಂದು ರಾಜೀನಾಮೆ ಪತ್ರದಲ್ಲಿ ಬರೆಯಲಾಗಿದೆ.