ಕಾಂಗ್ರೆಸ್ ಸರಕಾರ ಭಯೋತ್ಪಾದಕರನ್ನೂ ಓಲೈಸಲು ಮುಂದಾಗಿದೆ, ಕುಕ್ಕರ್ ಬಾಂಬ್ ಎಂದು ಹೇಳುವುದಕ್ಕೂ ಭಯ ಪಡುತ್ತಿದೆಯೇ? – ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬೃಜೇಶ್ ಚೌಟ

ಮಂಗಳೂರು : ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಕುಕ್ಕರ್ ಬಾಂಬ್ ಪ್ರಕರಣವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಕ್ಷುಲ್ಲಕ ಘಟನೆಯಂತೆ ಬಿಂಬಿಸಿದೆ. ಭಯೋತ್ಪಾದಕ ಕೃತ್ಯವನ್ನು ಸಾಮಾನ್ಯ ಘಟನೆಯೆಂದು ಚಿತ್ರಿಸಿ ರಾಜ್ಯದ ಜನರಿಗೆ ಸಂದೇಶ ನೀಡುವಂತೆ ಸರ್ಕಾರದ ಆದೇಶ ಪತ್ರದಲ್ಲಿ ತೋರಿಸಿದ್ದು ಗಂಭೀರ ಪ್ರಮಾದ. ಇದು ಮುಸ್ಲಿಂ ತುಷ್ಟೀಕರಣ ಮಾತ್ರವಲ್ಲ, ದೇಶಕ್ಕೆ ಆತಂಕ ತಂದೊಡ್ಡಿರುವ ಭಯೋತ್ಪಾದಕರನ್ನೂ ಓಲೈಕೆ ಮಾಡಿದಂತಿದೆ. ಬಾಂಬ್ ಘಟನೆಯೆಂದು ಹೇಳುವುದಕ್ಕೂ ಭಯಪಟ್ಟಿರುವುದನ್ನು ನೋಡಿದರೆ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸಲು ಯಾವ ಸ್ಥಿತಿಗೂ ಇಳಿಯುತ್ತದೆ ಎನ್ನುವುದನ್ನು ತೋರಿಸಿದೆ ಎಂದು ಭಾರತೀಯ ಜನತಾ ಪಾರ್ಟಿ ರಾಜ್ಯ ಕಾರ್ಯದರ್ಶಿ ಕ್ಯಾ. ಬೃಜೇಶ್ ಚೌಟ ಟೀಕಿಸಿದ್ದಾರೆ.

ಕುಕ್ಕರ್ ಬಾಂಬ್ ಘಟನೆಯಲ್ಲಿ ಗಂಭೀರ ಗಾಯಗೊಂಡು ಬದುಕುಳಿದಿರುವ ಪುರುಷೋತ್ತಮ ಪೂಜಾರಿ ಅವರಿಗೆ ಸಿಎಂ ಪರಿಹಾರ ನಿಧಿಯಿಂದ ಎರಡು ಲಕ್ಷ ರೂ. ನೆರವು ನೀಡಿದ್ದು ಒಳ್ಳೆಯ ಕೆಲಸವೇ ಆಗಿದ್ದರೂ, ಮುಖ್ಯಮಂತ್ರಿ ಕಚೇರಿಯ ಆದೇಶ ಪತ್ರದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಯಂತ್ರವನ್ನೇ ದುರುಪಯೋಗ ಪಡಿಸಿದೆ. ಆಟೋದಲ್ಲಿ ಪ್ರಯಾಣಿಕರೊಬ್ಬರು ಕುಕ್ಕರನ್ನು ಹಿಡಿದುಕೊಂಡಿದ್ದ ವೇಳೆ ಸಿಡಿದು ಉಂಟಾಗಿದ್ದ ಘಟನೆಯೆಂದು ಹೇಳಿರುವುದು, ಅದು ಭಯೋತ್ಪಾದಕ ಕೃತ್ಯವೇ ಅಲ್ಲ ಎನ್ನುವುದನ್ನು ಹೇಳಿದಂತಿದೆ. ಕುಕ್ಕರ್ ಸಾಮಾನ್ಯ ರೀತಿಯಲ್ಲಿ ಸಿಡಿಯುವುದಿದ್ದರೆ, ಎಲ್ಲೆಲ್ಲಿ ಕುಕ್ಕರ್ ಇರುತ್ತದೋ ಅವೆಲ್ಲ ಸಿಡಿದು ಹೋಗಬೇಕಿತ್ತು. ಮನೆಯಲ್ಲಿ ಕುಕ್ಕರಲ್ಲಿ ಅನ್ನ ಬೇಯಿಸುವಾಗ ಸಿಡಿಯುತ್ತಿದ್ದರೂ, ವ್ಯಕ್ತಿ ಕರಟಿ ಹೋಗುವ ಸ್ಥಿತಿ ಬರುತ್ತಿರಲಿಲ್ಲ. ಈ ಘಟನೆಯಲ್ಲಿ ಕುಕ್ಕರ್ ಹಿಡಿದುಕೊಂಡಿದ್ದ ವ್ಯಕ್ತಿಯಲ್ಲದೆ, ಆಟೋ ಚಾಲಕರಾಗಿದ್ದವರೂ ಸುಟ್ಟು ಹೋಗಿದ್ದರು ಎನ್ನುವುದು ಕಾಂಗ್ರೆಸಿನವರಿಗೆ ತಿಳಿದಿಲ್ಲವೇ?

ಭೀಕರ ಭಯೋತ್ಪಾದಕ ಕೃತ್ಯವನ್ನು ಯಾವುದೋ ಸಾಮಾನ್ಯ ಘಟನೆಯೆಂದು ಚಿತ್ರಿಸಿ ಕಾಂಗ್ರೆಸ್ ಸರಕಾರ ಜನತೆಗೆ ಯಾವ ಸಂದೇಶ ನೀಡುತ್ತಿದೆ. ಇದು ಸಾಮಾನ್ಯ ಘಟನೆಯೇ ಆಗಿದ್ದರೆ, ಕುಕ್ಕರ್ ಹಿಡಿದಿದ್ದ ವ್ಯಕ್ತಿಗೂ ಕಾಂಗ್ರೆಸ್ ಸರಕಾರ ಪರಿಹಾರ ನೀಡುತ್ತದೆಯೇ? ಕಾಂಗ್ರೆಸ್ ನಾಯಕರು ಹಿಂದೆಯೂ ಕುಕ್ಕರ್ ಬಾಂಬ್ ಕೃತ್ಯ ಸಾಮಾನ್ಯ ಘಟನೆಯೆಂದು ಹೇಳುತ್ತಿದ್ದರು. ಈಗ ಸರ್ಕಾರದ ಆದೇಶ ಪತ್ರದಲ್ಲಿಯೇ ಅದೊಂದು ಸಾಮಾನ್ಯ ಘಟನೆಯೆಂದು ಹೇಳಿದ್ದಾರೆ. ಒಂದ್ವೇಳೆ, ಆಗ ಕಾಂಗ್ರೆಸ್ ಸರಕಾರ ಇರುತ್ತಿದ್ದರೆ, ಅದರ ಹಿಂದಿನ ಉಗ್ರವಾದ ಕೃತ್ಯವಾಗಲೀ, ಆರೋಪಿ ಮೊಹಮ್ಮದ್ ಶಾರೀಕ್ ಎನ್ನುವುದಾಗಲೀ, ಆತ ಐಸಿಸ್ ಉಗ್ರರ ನಂಟು ಹೊಂದಿದ್ದಾಗಲೀ ಹೊರ ಬರುವುದಕ್ಕೆ ಸಾಧ್ಯವಿರುತ್ತಿತ್ತೇ ಎಂದು ಬೃಜೇಶ್ ಚೌಟ ಪ್ರಶ್ನಿಸಿದ್ದಾರೆ.

Advertisement

ಕುಕ್ಕರ್ ಬಾಂಬ್ ಘಟನೆಯ ಬಗ್ಗೆ ದೇಶದ ಅತ್ಯುನ್ನತ ತನಿಖಾ ಏಜನ್ಸಿಯಾದ ಎನ್ಐಎ ಈಗಾಗಲೇ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಅಲ್ಲದೆ, ಕುಕ್ಕರ್ ಹಿಡಿದುಕೊಂಡಿದ್ದ ವ್ಯಕ್ತಿ ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ದೇವಸ್ಥಾನವನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಎನ್ನುವುದನ್ನೂ ಹೇಳಿದೆ. ಸಾಕಷ್ಟು ಪುರಾವೆಗಳನ್ನು ಕಲೆಹಾಕಿದ ಬಳಿಕವೇ ಎನ್ಐಎ ಈ ಮಾಹಿತಿಗಳನ್ನು ಮಾಧ್ಯಮಕ್ಕೆ ನೀಡಿತ್ತು. ಹೀಗಿದ್ದರೂ, ಕಾಂಗ್ರೆಸ್ ಸರಕಾರ ಮಾತ್ರ ಅದೊಂದು ಸಾಮಾನ್ಯ ಘಟನೆಯೆಂದು ಚಿತ್ರಿಸಿ ಉಗ್ರರನ್ನೂ ತಮ್ಮ ಸೋದರರು ಎಂದು ಹಿಂದೆ ಹೇಳಿದ್ದ ಮಾತನ್ನು ಸಾಬೀತು ಪಡಿಸಿದೆ. ಇದಕ್ಕಾಗಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತರಬೇಕಾಗುತ್ತದೆ ಎಂದು ಬೃಜೇಶ್ ಚೌಟ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement