ಬೆಂಗಳೂರು: 5 ಅರೆಬರೆ ಗ್ಯಾರಂಟಿಗಳನ್ನು ಕೊಟ್ಟು ಕೈ ತೊಳೆದುಕೊಂಡಿರುವ ರಾಜ್ಯ ಸರ್ಕಾರ, ಪರಿಪೂರ್ಣವಾದ 6ನೇ ಗ್ಯಾರಂಟಿ ಕೊಡಲು ಸಿದ್ದತೆ ನಡೆಸಿದೆ. ಅದರ ಹೆಸರು ಕತ್ತಲೆಭಾಗ್ಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಲೋಡ್ ಶೆಡ್ಡಿಂಗ್ , ರೈತರ ಪಂಪ್ ಸೆಟ್‌ಗಳಿಗೆ ಸಿಗದ ವಿದ್ಯುತ್ ಮೊದಲಾದ ವಿಚಾರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದು, ಡಿಸೆಂಬರ್ ವೇಳೆಗೆ ಕರ್ನಾಟಕ ಈ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ. 2024ರ ಹೊಸ ವರ್ಷಕ್ಕೆ ತಾನು ಕೊಟ್ಟ ಗೃಹಜ್ಯೋತಿಗೆ ಎಳ್ಳುನೀರು ಬಿಟ್ಟು ಕಗ್ಗತ್ತಲ ಕರ್ನಾಟಕದ ಉದಯ ಮಾಡಿಸುವುದು ಗ್ಯಾರಂಟಿ ಎಂದು ಲೇವಡಿ ಮಾಡಿದ್ದಾರೆ.
ಕಾವೇರಿ ವಿಚಾರವಾಗಿ ಸರ್ಕಾರ ಕಳ್ಳಾಟ ಆಡಿದೆ. ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯದ ವಿರುದ್ಧ ನಿಲುವಳಿ ಸೂಚನೆ ಅಂಗೀಕಾರವಾಗಿದೆ. ಎಮ್ಮೆ ಚರ್ಮದ ಸರ್ಕಾರಕ್ಕೆ ಕಾವೇರಿ ಒಡಲಾಳದ ಬೇಗುದಿ ಬಗ್ಗೆ ಜಾಣ ಕುರುಡು. ಸರ್ಕಾರ ರಾಜ್ಯದ ಉದ್ದಗಲಕ್ಕೂ ಅನಧಿಕೃತ ಲೋಡ್ ಶೆಡ್ಡಿಂಗ್ ಹೇರಿ ದಿನಕ್ಕೆ 2 ಗಂಟೆ ವಿದ್ಯುತ್ತಿಗೂ ದಿಕ್ಕಿಲ್ಲದ ದುಸ್ಥಿತಿ ನಿರ್ಮಾಣ ಮಾಡಿದೆ ಎಂದು ಟೀಕಿಸಿದ್ದಾರೆ.
ಜಲಾಶಯಗಳು ಖಾಲಿಯಾಗಿದ್ದು, ವಿದ್ಯುತ್ ಉತ್ಪಾದನೆ ಮಿತವಾಗಿ ಮಾಡುವಂತೆ ಸರಕಾರವೇ ಆದೇಶಿಸಿದೆ. ಇನ್ನೊಂದೆಡೆ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಬವಣೆಯಿಂದ ಅಲ್ಪಸ್ವಲ್ಪ ಉತ್ಪಾದಿಸುತ್ತಿವೆ. ರಾಜ್ಯದ ಒಟ್ಟಾರೆ ಬೇಡಿಕೆಯಲ್ಲಿ ಶೇ.20ರಷ್ಟು ವಿದ್ಯುತ್ತನ್ನು ಸರಕಾರ ಹೊರಗಿನಿಂದಲೇ ಪಡೆಯುತ್ತಿದೆ. ರಾಜ್ಯವನ್ನು ವಿದ್ಯುತ್ ಸಾಲಕ್ಕೆ ತಳ್ಳಿ, ಕರುನಾಡನ್ನು ಬರ್ಬಾದ್ ಮಾಡಲಿದೆ ಕಾಂಗ್ರೆಸ್ ಸರಕಾರ. ಆದರೆ, ವಿದ್ಯುತ್ ಸಾಲ ನೀಡುವ ಸ್ಥಿತಿಯಲ್ಲಿ ಇತರೆ ರಾಜ್ಯಗಳೂ ಇಲ್ಲ. ಹಾಗಾದರೆ ಮುಂದೇನು? ಸಂಬಂಧಪಟ್ಟ ಸಚಿವರು ಮೌನವ್ರತ ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.