ಶಿವಮೊಗ್ಗ : ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುವಂತೆ ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಆಫರ್ ನೀಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಈಡಿಗ ಸಮುದಾಯದ ಮತಗಳನ್ನು ಸೆಳೆಯಲು ಮುಂದಾಗಿರುವ ಕಾಂಗ್ರೆಸ್, ಮಧು ಬಂಗಾರಪ್ಪ ಅವರ ಜೊತೆ ಡಿ.ಕೆ ಶಿವಕುಮಾರ್ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಿ.ವೈ ರಾಘವೇಂದ್ರ ವಿರುದ್ಧ ಕಣಕ್ಕೆ ಇಳಿಸಿ ಈಡಿಗ ಮತಗಳನ್ನು ಪಡೆಯುವ ತಂತ್ರವನ್ನು ಕಾಂಗ್ರೆಸ್ ರೂಪಿಸಿಕೊಂಡಿದ್ದು, ಈ ಮೂಲಕ ಬಿಜೆಪಿಗೆ ಬಲವಾದ ಹೊಡೆತ ನೀಡಲು ಮುಂದಾಗಿದೆ. ಶಿವಮೊಗ್ಗ ಲೋಕಸಭಾ ಅಥವಾ ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಫರ್ ನೀಡಲಾಗಿದೆ ಎಂದು ಮಾಹಿತಿ ಹರಿದಾಡುತ್ತಿದೆ.
ಕಳೆದ ಚುನಾವಣೆಯಲ್ಲಿ ತಮ್ಮ ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ಪಕ್ಷದಿಂದ ಕುಮಾರ್ ಬಂಗಾರಪ್ಪ ಸ್ಪರ್ಧಿಸಿದ್ದರು. ಆದರೆ, ಮಧು ಬಂಗಾರಪ್ಪ ವಿರುದ್ಧ ಸೋತ ಕುಮಾರ್, ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಡಿಮೆ ಮಾಡಿದ್ದರು. ಆದರೆ, ಈಗ ಕಾಂಗ್ರೆಸ್ ಸೇರಿಕೊಳ್ಳುವ ಕುಮಾರ್ ಬಂಗಾರಪ್ಪ ಬಗ್ಗೆ ಮಧು ಬಂಗಾರಪ್ಪ ವಿರೋಧ ವ್ಯಕ್ತಪಡಿಸಿದ್ದು, ಸಚಿವ ಮಧು ಬಂಗಾರಪ್ಪ ಅವರಿಗೆ ಸುಮ್ಮನಿರಲು ಕಾಂಗ್ರೆಸ್ ತಿಳಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಕುಮಾರ್ ಬಂಗಾರಪ್ಪ, ಕಾಂಗ್ರೆಸ್ ಸೇರಿಕೊಳ್ಳುತಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಕುಮಾರ್ ಅವರ ಜನ್ಮ ದಿನದ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳು ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಹರಿದಾಡುತ್ತಿದೆ.