ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಪಾಲಿಗೆ ಇಂದು (ಅಕ್ಟೋಬರ್ 8) ಬಹಳ ವಿಶೇಷವಾದ ದಿನ. ಯಾಕೆಂದರೆ, ಇಂದು ದೆಹಲಿಯಲ್ಲಿ ರಾಷ್ಟ್ರಪತಿಗಳ ಕೈಯಿಂದ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ಅವರಿಗೆ ಬೆಸ್ಟ್ ಆ್ಯಕ್ಟರ್ ನ್ಯಾಷನಲ್ ಅವಾರ್ಡ್ ಸಿಕ್ಕಿದೆ. ಪತ್ನಿ ಸಮೇತರಾಗಿ ದೆಹಲಿಗೆ ತೆರಳಿದ ರಿಷಬ್ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿ ಖುಷಿಪಟ್ಟಿದ್ದಾರೆ.
ರಿಷಬ್ ಶೆಟ್ಟಿ ಅವರು ನಮ್ಮ ನೆಲದ ಸೊಗಡಿಗೆ ಹೆಚ್ಚು ಬೆಲೆ ನೀಡುತ್ತಾರೆ. ಅವರು ಸಿನಿಮಾಗಳಲ್ಲೂ ಅದು ಎದ್ದು ಕಾಣುತ್ತದೆ. ‘ಕಾಂತಾರ’ ಸಿನಿಮಾದ ಮೂಲಕ ಅವರು ದೇಸಿ ಕಹಾನಿಯನ್ನು ಹೇಳಿದ್ದರು. ಆ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಅವರ ನಟನೆಯನ್ನು ನೋಡಿ ಪ್ರೇಕ್ಷಕರು ಫಿದಾ ಆದರು. ‘ಕಾಂತಾರ’ ಸಿನಿಮಾದಿಂದ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಆದರು. ಎಷ್ಟೇ ಫೇಮ್ ಸಿಕ್ಕರೂ ಕೂಡ ಅವರು ನೆಲೆದ ಸೊಗಡನ್ನು ಮರೆತಿಲ್ಲ.
ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಅವರು ಈಗಾಗಲೇ ಅನೇಕ ಕಾರ್ಯಕ್ರಮಗಳಿಗೆ ಪಂಚೆ ಧರಿಸಿ ಹೋಗಿದ್ದರು. ಸಾಮಾನ್ಯವಾಗಿ ಕಲಾವಿದರು ಅವಾರ್ಡ್ ಫಂಕ್ಷನ್ಗಳಿಗೆ ಹೋಗುವಾಗ ಸೂಟು-ಬೂಟು ಧರಿಸುತ್ತಿದ್ದರು. ಆದರೆ ಕೆಲವು ನಟರು ಅಪ್ಪಟ ಸಾಂಪ್ರದಾಯಿಕ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂಥವರ ಸಾಲಿನಲ್ಲಿ ರಿಷಬ್ ಶೆಟ್ಟಿ ಕೂಡ ಇದ್ದಾರೆ. ಪಂಚೆ ಧರಿಸಿ ಅವರು ವೇದಿಕೆ ಏರಿದ್ದಾರೆ.