ಕೇರಳ: ಕಾಂತಾರ ಸಿನೆಮಾ ದ ವರಾಹ ರೂಪಂ ಹಾಡಿನ ಬಗ್ಗೆ ಎದ್ದಿರುವ ವಿವಾದ ಕೊನೆಗೂ ಅಂತ್ಯವಾಗಿದ್ದು, ಕಾಫಿರೈಟ್ ಸಂಬಂಧಿಸಿದಂತೆ ಕೋರ್ಟ್ ನಲ್ಲಿದ್ದ ಎಲ್ಲಾ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ದೂರುದಾರ ಹಾಗೂ ಪ್ರತಿವಾದಿಗಳ ನಡುವೆ ಸಂಧಾನ ಏರ್ಪಟ್ಟಿರುವ ಕಾರಣ ಕೇರಳ ಹೈಕೋರ್ಟ್ ಪ್ರಕರಣ ಕುರಿತಾದ ಎಲ್ಲ ವಿಚಾರಣೆ, ತನಿಖೆಗಳನ್ನು ರದ್ದು ಮಾಡಿದೆ.
ಕೇರಳದ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕಾಂತಾರ ಸಿನೆಮಾದಲ್ಲಿದ್ದ ವರಾಹ ರೂಪಂ ಹಾಡು ನಕಲು ಎಂದು ಆ ಹಾಡಿನ ಹಕ್ಕು ಹೊಂದಿರುವ ಮಾತೃಭೂಮಿ ಪಬ್ಲಿಷರ್ಸ್ ದಾವೆ ಹೂಡಿದ್ದರು. ಮೊದಲಿಗೆ ಕೆಳ ಹಂತದ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ‘ವರಾಹ ರೂಪಂ’ ಹಾಡನ್ನು ಚಿತ್ರಮಂದಿರಗಳಲ್ಲಿ ಅಥವಾ ಒಟಿಟಿ ಇನ್ನಿತರೆ ಡಿಜಿಟಲ್ ಮಾಧ್ಯಮಗಳಲ್ಲಿ ಬಳಸದಂತೆ ಆದೇಶ ನೀಡಲಾಗಿತ್ತು. ಪ್ರಕರಣವು ಕೇರಳ ಹೈಕೋರ್ಟ್ ಮೆಟ್ಟಿಲೇರಿ ಕಾಂತಾರ ಚಿತ್ರತಂಡಕ್ಕೆ ಅಲ್ಪ ನೆಮ್ಮದಿ ಸಿಕ್ಕಿತ್ತಾದರೂ ಆ ಬಳಿಕ ಮತ್ತೆ ಚಿತ್ರತಂಡದ ವಿರುದ್ಧ ತಾತ್ಕಾಲಿಕ ಆದೇಶ ಹೊರಬಿದ್ದಿತ್ತು. ಇದೀಗ ‘ಕಾಂತಾರ’ ಸಿನಿಮಾ ತಂಡದ ಪರ ವಾದ ಮಂಡಿಸುತ್ತಿದ್ದ ವಿಜಯ್ ವಿ ಪೌಲ್ ಅವರು, ಕಾಂತಾರ ಚಿತ್ರತಂಡ ಹಾಗೂ ಮಾತೃಭೂಮಿ ಪಬ್ಲಿಷರ್ಸ್ ನಡುವೆ ಸಂಧಾನ ಏರ್ಪಟ್ಟಿರುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದು, ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದು ಮಾಡುವಂತೆ ಮನವಿಯನ್ನು ಮಾಡಿದ್ದರು. ಮನವಿ ಸ್ವೀಕರಿಸಿದ ಕೇರಳ ಹೈಕೋರ್ಟ್ ಸಿಆರ್ಪಿಸಿ ಸೆಕ್ಷನ್ 482 ಅಡಿಯಲ್ಲಿ ತನ್ನ ವಿಶೇಷ ಅಧಿಕಾರ ಬಳಸಿ ಪ್ರಕರಣವನ್ನು ರದ್ದು ಮಾಡಿದೆ. ಈ ವಿವಾದವು ಎರಡು ಸಂಸ್ಥೆಗಳ ನಡುವಿನ ಖಾಸಗಿ ವಿವಾದಂತೆ ತೋರುತ್ತದೆ ಎಂದ ಕೇರಳ ಹೈಕೋರ್ಟ್, ಈ ಹಿಂದಿನ ಕೆಲವು ಇಂಥಹುದೇ ಪ್ರಕರಣಗಳನ್ನು ಉಲ್ಲೇಖಿಸಿ ಪ್ರಕರಣವನ್ನು ರದ್ದು ಮಾಡಿದೆ.