ಚಿತ್ರದುರ್ಗ : ಪ್ರತಿಯೊಬ್ಬರಲ್ಲಿಯೂ ಕಾನೂನು ಅರಿವು ಇದ್ದಾಗ ಮಾತ್ರ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬಹುದೆಂದು ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು.
ಎಸ್.ಜೆ.ಎಂ. ಡೆಂಟಲ್ ಕಾಲೇಜು ಆವರಣದಲ್ಲಿರುವ ಎಸ್.ಜೆ.ಎಂ.ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಐದು ವರ್ಷ ಹಾಗೂ ಮೂರು ವರ್ಷದ ಕಾನೂನು ಪದವಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಸಣ್ಣಪುಟ್ಟ ತಪ್ಪುಗಳನ್ನು ವಿದ್ಯಾರ್ಥಿಗಳು ತಿದ್ದಿಕೊಳ್ಳಬೇಕೆಂದು ಡಾ.ಹಾ.ಮಾ.ನಾಯಕ್ ಹೇಳುತ್ತಿದ್ದರು ಎನ್ನುವುದು ನೆನಪಿಸಿಕೊಂಡ ಬಸವಪ್ರಭು ಸ್ವಾಮೀಜಿ ವಿದ್ಯಾರ್ಥಿಗಳು ಶಿಸ್ತುಬದ್ದ ಜೀವನ ರೂಢಿಸಿಕೊಳ್ಳಬೇಕು. ಪಾಠ ಕೇಳುವ ಹಂಬಲದಿಂದ ಶಾಲೆ-ಕಾಲೇಜುಗಳಿಗೆ ಹೋಗಬೇಕು. ಏಕಾಗ್ರತೆಯಿಂದ ಯಾರು ಪಾಠ ಕೇಳುತ್ತಾರೋ ಅಂತಹ ವಿದ್ಯಾರ್ಥಿಗಳು ರ್ಯಾಂಕ್ ಪಡೆದು ತಾನು ಓದಿದ ಶಿಕ್ಷಣ ಸಂಸ್ಥೆಗೆ ಕೀರ್ತಿ ತರುತ್ತಾರೆ. ಪಾಠ ಕೇಳುವಾಗ ಮನಸ್ಸು ಬೇರೆ ಕಡೆ ಹೋಗಬಾರದು. ಗಮನ ಕೊಟ್ಟು ಪಾಠ ಕೇಳಿಸಿಕೊಳ್ಳುವವರು ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮುತ್ತಾರೆಂದು ತಿಳಿಸಿದರು.
ದೇಶದ ಕಾನೂನು ಪ್ರತಿಯೊಬ್ಬರನ್ನು ಕಾಪಾಡುತ್ತದೆ. ಆದರೆ ಪ್ರತಿ ಮನುಷ್ಯ ತನ್ನ ಜೀವ ಹಾಗೂ ಆಸ್ತಿಯನ್ನು ರಕ್ಷಿಸಿಕೊಳ್ಳಬೇಕಾದರೆ ಸ್ವಲ್ಪವಾದರೂ ಕಾನೂನು ತಿಳಿದುಕೊಂಡಿರಬೇಕು. ಆಗ ಮಾತ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.
ಎಸ್.ಜೆ.ಎಂ.ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಂಚಾಕ್ಷರಿ ಹೆಚ್.ಎಸ್. ಮಾತನಾಡಿ ಕಾನೂನು ವಿದ್ಯಾರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಪಠ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಕ್ರೀಡಾ, ಸಾಂಸ್ಕøತಿಕ, ಎನ್.ಎಸ್.ಎಸ್.ನಂತಹ ಚಟುವಟಿಕೆಗಳಿರಬೇಕು. ಶಿಕ್ಷಕರು ಹಾಗೂ ಪೋಷಕರುಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಬೇಕೆಂದು ಕರೆ ನೀಡಿದರು.
ಕಾನೂನು ಪದವಿ ಪಡೆಯುವುದರಿಂದ ಕಾನೂನು ಚೆನ್ನಾಗಿ ತಿಳಿದುಕೊಂಡು ಸ್ವಾವಲಂಭಿಯಾಗಿ ಬದುಕಬಹುದು ಎಂದು ಕಾನೂನು ಶಿಕ್ಷಣದ ಮಹತ್ವ ತಿಳಿಸಿದರು.