ಕಾರವಾರ :ಭಾರೀ ಅವಘಡ ಸಂಭವಿಸಿದ್ದು ಅಂದಾಜು 200ಮೀಟರ್ ಉದ್ದದ ಕಾಳಿ ನದಿಯ ಸೇತುವೆ ಕುಸಿದಿದೆ. ಕಾರವಾರದ ಮೂಲಕ ಹರಿಯುವ ಕಾಳಿ ನದಿಯ ಮೇಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣವಾಗಿದ್ದ ಸೇತುವೆ ರಾತ್ರಿ ವೇಳೆ ಕುಸಿದಿದ್ದು, ಘಟನೆಯಲ್ಲಿ ಲಾರಿಯೊಂದು ಚಾಲಕನ ಸಮೇತ ನದಿಗೆ ಬಿದ್ದಿದೆ ವಿಚಾರ ತಿಳಿದ ತಕ್ಷಣವೇ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಚಾಲಕನನ್ನು ರಕ್ಷಿಸಿದ್ದಾರೆ.
ಗೋವಾದಿಂದ ಹುಬ್ಬಳ್ಳಿ ಕಡೆ ಮಧ್ಯರಾತ್ರಿ ತೆರಳುತಿದ್ದ ತಮಿಳುನಾಡು ಮೂಲದ ಟ್ರಕ್ ಸೇತುವೆ ಮೇಲೆ ತೆರಳುತಿದ್ದಂತೆ ಮೊದಲ ಭಾಗ ಕುಸಿದಿದೆ ನಂತರ ಮೂರು ಕಡೆ ಕುಸಿದಿದೆ. ಸದ್ಯ ಟ್ರಕ್ ಚಾಲಕನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನದಿಗೆ ನಿರ್ಮಿಸಿರುವ ಇನ್ನೊಂದು ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸೇತುವೆ ಕುಸಿತದಲ್ಲಿ ಇನ್ನಷ್ಟು ವಾಹನ ಬಿದ್ದಿರುವ ಶಂಕೆ ಹಿನ್ನೆಲೆ ನದಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಇನ್ನು ಯಮನ್ ಇಂಡಿಯಾ ಎಂಬ ಕಂಪನಿಯಿಂದ 41 ವರ್ಷದ ಹಿಂದೆ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿತ್ತು. ಕಾರವಾರ ನಗರ ಠಾಣೆಯಲ್ಲಿ NHAI ಹಾಗೂ IRB ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ.