ಕಾರ್ಕಳ : ನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಶೃತಿನ್ ಶೆಟ್ಟಿ ಕಾಣೆಯಾಗಿರುವ ಕುರಿತು ಅವರ ಪತ್ನಿ ದೂರು ದಾಖಲಿಸಿದ್ದಾರೆ. ಕಾಪು ಜನಾರ್ದನ ದೇವಸ್ಥಾನ ಬಳಿಯಿರುವ ಅಂಗಡಿಮನೆ ನಿವಾಸಿ ಶೃತಿನ್ ಶೆಟ್ಟಿ ಗುರುವಾರ ರಾತ್ರಿ 7.30ಕ್ಕೆ ಹೆಂಡತಿಗೆ ಫೋನ್ ಮಾಡಿ ನಾನು ನಂದಿಕೂರಿನಲ್ಲಿದ್ದು, ಮನೆಗೆ ಬರುತ್ತಿರುವುದಾಗಿ ಹೇಳಿದ್ದಾರೆ. ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿಯಿಡೀ ಮನೆಗೆ ಬಾರದಿರುವ ಹಿನ್ನೆಲೆಯಲ್ಲಿ ಗಾಬರಿಯಾಗಿರುವ ಪತ್ನಿ ಪೂಜಾ ಶೆಟ್ಟಿ ಶುಕ್ರವಾರ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. 2008ರ ಬ್ಯಾಚಿನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದ ಶೃತಿನ್ ಶೆಟ್ಟಿ ಎರಡು ತಿಂಗಳ ಹಿಂದೆಯಷ್ಟೇ ಬಡ್ತಿಯಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ಆಗಿ ಬಂದಿದ್ದರು. ಅಕ್ಟೋಬರ್ 17ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಅಕ್ಟೋಬರ್ 18ಕ್ಕೆ ವಾರದ ರಜೆಯಿತ್ತು. 19ರಂದು ಸಿಎಲ್ ರಜೆ ಹಾಕಿದ್ದರು.