ಮಂಗಳೂರು : ದ.ಕ ಜಿಲ್ಲೆಯಲ್ಲಿ ಮಾತ್ರವಲ್ಲದೆ ಈ ಬಾರಿ ಅನೇಕ ಕಡೆಗಳಲ್ಲಿ ಧಾರಾಕಾರವಾಗಿ ಗಾಳಿ ಮಳೆ ಸುರಿದು ಅದೆಷ್ಟೋ ಅವಾಂತರವನ್ನು ಸೃಷ್ಟಿಸಿತ್ತು. ಕೆಲವು ಕಡೆ ಭೂಕುಸಿತ, ಕೃತಕ ನೆರೆಯಂತಹ ಪ್ರಾಕೃತಿಕ ವಿಕೋಪಗಳಿಂದ ಜೀವ ಹಾನಿ ಸಂಭವಿಸಿದಲ್ಲದೆ ಅಪಾರ ನಷ್ಟ ಕೂಡಾ ಸಂಭವಿಸಿತ್ತು. ದ.ಕ ಜಿಲ್ಲೆಯಲ್ಲಿ ಎಡೆಬಿಡದೆ ಸುರಿದ ಧಾರಾಕಾರ ಮಳೆಯ ಕಾರಣದಿಂದಾಗಿ ಮುಂಜಾಗೃತಾ ದೃಷ್ಟಿಯಿಂದ ಶಾಲಾ ಕಾಲೇಜು ಮಕ್ಕಳಿಗೆ ದ.ಕ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದರು. ಒಟ್ಟು ಮಳೆಯ ಸಂದರ್ಭ ಹದಿಮೂರು ರಜೆಯನ್ನು ನೀಡಲಾಗಿತ್ತು.
ಇದೀಗ ಅದನ್ನು ಸರಿದೂಗಿಸಲು ಹೊಸದೊಂದು ಯೋಜನೆಯನ್ನು ರೂಪಿಸಲಾಗುತ್ತಿದೆ. ಹೌದು, ಈಗ ಈ ರಜೆಯ ಪ್ಯಾಚಪ್‌ಗಾಗಿ ಶಿಕ್ಷಣ ಇಲಾಖೆ ಸಜ್ಜಾಗಿದ್ದು, ಈ ಶೈಕ್ಷಣಿಕ ವರ್ಷದ 26 ಶನಿವಾರಗಳನ್ನು ಬಳಸಿಕೊಳ್ಳಲು ಚಿಂತನೆ ನಡೆಸುತ್ತಿದೆ.
ಮಳೆಗಾಗಿ ರಜೆ ನೀಡುವುದರಲ್ಲಿ ದ.ಕ ಮೊದಲ ಸ್ಥಾನ
ಸಾಮಾನ್ಯವಾಗಿ ಟಿವಿ ವೀಕ್ಷಣೆ ಮಾಡದ ದ.ಕ ಜಿಲ್ಲೆಯ ಶಾಲಾ ಮಕ್ಕಳು ಧಾರಾಕಾರ ಮಳೆ ಇರುವಾಗ ಟಿವಿಯಲ್ಲಿ ಪ್ರಸಾರವಾಗುವ ಸುದ್ದಿಗಳತ್ತ ಮುಖ ಮಾಡಿದ್ದರು. ಯಾಕೆಂದರೆ ಜಿಲ್ಲಾಧಿಕಾರಿ ಇವತ್ತು ಕೂಡಾ ರಜೆ ಘೋಷಣೆ ಮಾಡಿರಬಹುದು ಎಂಬ ಆಶಾವಾದಿತನದಿಂದ. ಕಳೆದ ಕೆಲವು ವರ್ಷಗಳಿಂದ ಮಳೆಗಾಗಿ ರಜೆ ನೀಡುವುದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.
ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಳೆಯಿಂದಾಗಿ ಸಾಲು ಸಾಲು ರಜೆಗಳು ಪಾಠ ಪ್ರವಚನಕ್ಕೆ ಸಾಕಷ್ಟು ಹೊಡೆತ ನೀಡುತ್ತಾ ಸಾಗಿದೆ. ಆದರೆ ರಜೆಗೆ ಪೂರಕವಾಗುವಂತೆ ಹೆಚ್ಚುವರಿ ತರಗತಿ ನಡೆಸುವ ಚಿಂತನೆ ನಡೆದರೂ ಅದು ಪೂರ್ಣ ರೂಪದಲ್ಲಿ ಸಾಕಾರಗೊಳ್ಳುವಲ್ಲಿ ವಿಫಲವಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಯು ಕಾಲೇಜಿಗೆ ಭಾನುವಾರವೂ ಕ್ಲಾಸ್ ನಡೆಸುವ ಚಿಂತನೆ
ಜಿಲ್ಲೆಯ ಪಿಯು ಕಾಲೇಜಿಗೆ ಭಾನುವಾರವೂ ಕೂಡಾ ಕ್ಲಾಸ್ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಆದರೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾನುವಾರ ಹೆಚ್ಚಾಗಿ ಸಿಇಟಿ, ನೀಟ್, ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಹೋಗುವುದರಿಂದ ಭಾನುವಾರ ತರಗತಿ ನಡೆಸುವ ಬಗ್ಗೆ ಒಮ್ಮತವಿಲ್ಲ. ಪಿಯು ವಿದ್ಯಾರ್ಥಿಗಳಿಗೆ ಶನಿವಾರದ ತರಗತಿ ಸಾಕಾಗದೆ ಹೋದರೆ ಭಾನುವಾರ ಅರ್ಧ ದಿನವಾದರೂ ತರಗತಿ ನಡೆಸಿ ಪರೀಕ್ಷೆಯ ಮೊದಲು ಸಿಲೆಬಸ್ ಪೂರ್ಣ ಮಾಡಿ ಎಂಬ ಸೂಚನೆ ನೀಡಲಾಗಿದೆ.
ದಸರಾ, ಕ್ರಿಸ್ಮಸ್ ರಜೆಗೂ ಕತ್ತರಿ
ದ.ಕ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಧಾರಾಕಾರ ಮಳೆಯ ಕಾರಣದಿಂದ ಹೆಚ್ಚುವರಿ ರಜೆಯನ್ನು ಕೂಡಾ ನೀಡಲಾಗಿದೆ. ಇನ್ನೇನೋ ಸ್ವಲ್ಪ ದಿನಗಳಲ್ಲಿ ಮಂಗಳೂರಿಗರ ನೆಚ್ಚಿನ ನವರಾತ್ರಿ ಹಬ್ಬವೂ ಸಮೀಪಿಸುತ್ತಿದೆ. ಈಗಾಗಲೇ ನಾಗರಪಂಚಮಿಯಿಂದ ಆರಂಭವಾಗಿ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಆದರೆ ಈ ದಸರಾ ರಜೆಯನ್ನೂ ಕೂಡಾ ಶಾಲಾ ಕಾಲೇಜು ಮಕ್ಕಳಿಗೆ ಕಡಿತಗೊಳಿಸುವ ಸಾಧ್ಯತೆ ಇದೆ
. ಈ ಶನಿವಾರಗಳ ಲೆಕ್ಕಚಾರ ಮುಗಿಸುವುದು ಬಹಳ ಕಷ್ಟಕರ. ದಸರಾ, ಕ್ರಿಸ್ಮಸ್ ರಜೆ ಕಡಿತಗೊಳಿಸಲು ರಾಜ್ಯ ಸರಕಾರವೇ ಮುಂದಾಗಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ರಜೆಯನ್ನು ಸರಿದೂಗಿಸುವಲ್ಲಿ ರಾಜ್ಯ ಸರ್ಕಾರ, ಶಿಕ್ಷಣ ಅಧಿಕಾರಿಗಳು ಯಾವ ರೀತಿಯ ಯೋಜನೆಯನ್ನು ಸಿದ್ಧಪಡಿಸುತ್ತಾರೆ ಎಂಬ ಕುತೂಹಲ ಮಾತ್ರ ಶಾಲಾ ಕಾಲೇಜು ವಿದ್ಯಾರ್ಥಿಗಳದ್ದು.
ಎಸ್ಎಸ್ಎಲ್ ಸಿ ಮತ್ತು ಸೆಕೆಂಡ್ ಪಿಯು ಸಮಯ ಬದಲು
ಶಿಕ್ಷಣ ವ್ಯವಸ್ಥೆಯಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಒಂದು ಮಹತ್ವದ ಘಟ್ಟವಾಗಿದೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಕೂಡಾ ಈ ಎರಡು ತರಗತಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಈ ಬಾರಿಯ ಮಳೆಯ ರಜೆ ಈ 2 ತರಗತಿಗಳಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇರುವುದರಿಂದ ಎಸ್ಸೆಸ್ಸೆಲ್ಸಿಗೆ ಬೆಳಗ್ಗೆ ಒಂದು ಗಂಟೆ ಹಾಗೂ ಸಂಜೆ ಒಂದು ಗಂಟೆ ವಿಶೇಷ ತರಗತಿ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿದ್ದು, ಶಾಲೆಗಳಿಗೆ ಸೂಚನೆ ನೀಡಿದೆ ಎಂದು ಡಿಡಿಪಿಯು ತಿಳಿಸಿದ್ದಾರೆ.