ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ನಡುವೆಯೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತರು ಕೆಆರ್‌ಎಸ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಇದನ್ನು ಪ್ರಶ್ನಿಸಿ ರೈತ ಸಂಘವು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲು ಮುಂದಾಗಿದೆ. ಕಾವೇರಿ ನೀರಿಗಾಗಿ ಕಾನೂನು ಹೋರಾಟಕ್ಕೆ ಮುಂದಾಗಿರುವ ರೈತ ಸಂಘದ ಪರವಾಗಿ ಅರ್ಜಿ ಸಲ್ಲಿಸಲು ಶಾಸಕ ದರ್ಶನ್ ಪುಟ್ಟಣ್ಣಯ್ಯ ದೆಹಲಿಗೆ ತೆರಳಿರುವುದಾಗಿ ವರದಿಯಾಗಿದೆ. ಹಿರಿಯ ವಕೀಲ ರವಿವರ್ಮ ಅವರ ಮೂಲಕ ಸುಪ್ರೀಂಗೆ ಇಂದು ಅವರು ಅರ್ಜಿ ಸಲ್ಲಿಸಲಿದ್ದಾರೆ. ಕೋರ್ಟ್‍ಗೆ ಕಾವೇರಿ ಕೊಳ್ಳದ ಸಂಕಷ್ಟದ ಪರಿಸ್ಥಿತಿ ಮನವರಿಕೆ ಮಾಡಲಾಗುತ್ತದೆ. ಪ್ರಸಕ್ತ ಜಲಾಶಯದ ನೀರಿನ ಮಟ್ಟ, ರೈತರ ಬೆಳೆಗೆ ನೀರಿಲ್ಲದಿರುವ ವಸ್ತುಸ್ಥಿತಿ ಹಾಗೂ ಕುಡಿಯಲು ಅಗತ್ಯ ಇರುವ ನೀರಿನ ಬಗ್ಗೆ ಅಂಕಿ ಅಂಶಗಳನ್ನು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ
ಅರ್ಜಿ ಸಲ್ಲಿಕೆಗಾಗಿ ಕಳೆದ 5 ದಿನಗಳಿಂದಲೇ ಪೂರ್ವ ತಯಾರಿ ಮಾಡಲಾಗಿತ್ತು. ಈ ವಿಚಾರವಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಕೀಲರೊಂದಿಗೆ ಖುದ್ದು ದೆಹಲಿಗೆ ತೆರಳಿದ್ದಾರೆ.