ಬೆಂಗಳೂರು : ಕಾವೇರಿ ನೀರು ಹಂಚಿಕೆ ಸಂಬಂಧ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ಜತೆ ಸಭೆ ನಡೆಸಿದ್ದೇವೆ. ಸದ್ಯಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮತ್ತು ಜಲ ಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ಜತೆಗಿನ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ಸಂಕಷ್ಟದ ಪರಿಸ್ಥಿತಿಯನ್ನು ಕೇಂದ್ರ ಸಚಿವರಿಗೆ ಸಮರ್ಥವಾಗಿ ತಿಳಿಸಿದ್ದೇವೆ. ಅವರ ಸ್ಪಂದನೆ ಸಕಾರಾತ್ಮಕವಾಗಿತ್ತು. ಸುಪ್ರೀಂಕೋರ್ಟ್ ನಲ್ಲೂ ನಮ್ಮ ಮನವಿ ವಿಚಾರಣೆಗೆ ಬರಲಿದೆ. ಸುಪ್ರೀಂಕೋರ್ಟ್ ನಮ್ಮ ಮನವಿಯನ್ನು ಪುರಸ್ಕರಿಸಿ CWMC ಆದೇಶಕ್ಕೆ ತಡೆಯಾಜ್ಞೆ ನೀಡುವ ಭರವಸೆ ಇದೆ. ಹೀಗಾಗಿ ನಾವು ಸುಪ್ರೀಂಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಬಳಿಕ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ವಿವರಿಸಿದರು.
ನಾವು ಪ್ರಧಾನಿ ಅವರ ಸಮಯವನ್ನೂ ಕೇಳಿದ್ದೇವೆ. ಸಮಯ ಸಿಕ್ಕರೆ ಭೇಟಿ ಆಗುತ್ತೇವೆ. ನಾಲ್ಕೂ ರಾಜ್ಯದವರನ್ನು ಕರೆಸಿ ಮಾತನಾಡಲು ಮಧ್ಯ ಪ್ರವೇಶಿಸಿ ಎಂದು ಪ್ರಧಾನಿಗೆ ಮನವಿ ಮಾಡುತ್ತೇವೆ.