ಕಾವ್ಯ ಮನುಷ್ಯ-ಮನುಷ್ಯರ ನಡುವೆ ಬಾಂಧವ್ಯ ಬೆಸೆಯುವ ಸಾಧನವಾಗಬೇಕು: ಡಾ.ಡಿ.ವಿ.ಪರಮಶಿವಮೂರ್ತಿ

 

ಚಿತ್ರದುರ್ಗ : ಇಡಿ ಜಗತ್ತು ಕ್ರೂರವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕಾವ್ಯ ಮನುಷ್ಯ-ಮನುಷ್ಯರ ನಡುವೆ ಬಾಂಧವ್ಯ ಬೆಸೆಯುವ ಸಾಧನವಾಗಬೇಕೆಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರೋಟರಿ ಕ್ಲಬ್ ಫೋರ್ಟ್ ಚಿತ್ರದುರ್ಗ, ಮುಕ್ತ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ಸತ್ಯವ್ರತಿಯ ಸ್ಪಷ್ಟಪದಿಗಳು ಗ್ರಂಥ ಲೋಕಾರ್ಪಣೆಯನ್ನು ಮೆದೆಹಳ್ಳಿ ರಸ್ತೆಯ ಮರುಳಪ್ಪ ಬಡಾವಣೆಯಲ್ಲಿರುವ ಆದಿಶೇಷ ರೋಟರಿ ಭವನದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದರು.

Advertisement

ಹನ್ನೆರಡನೆ ಶತಮಾನದಲ್ಲಿ ಸಮಾಜವನ್ನು ಸರಿದಾರಿಗೆ ತರಲು ಬಯಸಿದ ವಚನಕಾರರ ಪ್ರಯತ್ನ ಈ ಕೃತಿಯಲ್ಲಿ ಮುಂದುವರೆದಿದೆ. ಆತಂಕದ ಕಾಲ ಇದಾಗಿರುವುದರಿಂದ ನೂರಾರು ಸಾವಿರಾರು ವಚನಕಾರರ ಅಗತ್ಯವಿದೆ. ಮನುಷ್ಯನ ಮನಸ್ಸು, ಅಭಿಪ್ರಾಯ, ಕಾರ್ಯಗಳು ಕ್ರೂರತ್ವದ ಕಡೆ ಹೋಗುತ್ತಿದೆ. ವಚನಕಾರರ ಪ್ರಯತ್ನ ಎಲ್ಲೆಡೆ ದಟ್ಟವಾಗಿ ಹರಡಬೇಕು. ಅಹಂಕಾರ, ಕ್ರೌರ್ಯ ತುಂಬಿಕೊಂಡು ಮೆರೆಯುತ್ತಿರುವವರು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ಹೇಳಿದರು.

ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ಸತ್ಯವ್ರತಿಯ ಸ್ಪಷ್ಟಪದಿಗಳು ಅಬ್ಬರ, ಬಿರುಸಿಲ್ಲದೆ ಮೌನ ನವಿರಾಗಿ ಸಮಾಜದಲ್ಲಿ ಬದಲಾವಣೆಗೆ ಪ್ರಯತ್ನ ಮಾಡಿದೆ. ದಾರ್ಶನಿಕರು ವಚನಕಾರರು ಬಯಸಿದಂತೆ ಕೆಟ್ಟ ಮನಸ್ಸುಗಳನ್ನು ಸರಿದಾರಿಗೆ ತರುವ ಪ್ರಯತ್ನ ಕೃತಿಯಲ್ಲಿದೆ. ಕಾಲ ಎಲ್ಲವನ್ನು ಹಿಂದಕ್ಕೆ ಸರಿಸುತ್ತಿದೆ. ಮಂಡನೆ, ಮರು ಮಂಡನೆ ಬೇಕು. ಇದೊಂದು ಅನುಭಾವಿಯ ಕಾವ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ,ಗ್ರಂಥ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು., ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಕನ್ನಡ ವಿಶ್ವವಿದ್ಯಾನಿಲಯ ಹಂಪಿಯ ಶೈಕ್ಷಣಿಕ ನಿರ್ದೇಶಕರಾದ ಡಾ.ಎಸ್.ವೈ.ಸೋಮಶೇಖರ್,  ಮುಕ್ತ ವಿಚಾರ ವೇದಿಕೆ ಸಂಚಾಲಕ ಹಾಗೂ ವಿಶ್ರಾಂತ ಪ್ರಾಂಶುಪಾಲ ಪ್ರೊ.ಸಿ.ಬಸವರಾಜಪ್ಪ ಶ್ರೀಮತಿ ಸುಲೋಚನಾ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ನುಡಿ ನಮನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕೃತಿಕಾರ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಜಿಲ್ಲಾ ರೋಟರಿ ಗೌರ್ವನರ್ ರೊ.ಎಂ.ಕೆ.ರವೀಂದ್ರ, ರೇಖಾ ಚಿತ್ರಕಾರ ಜಬೀವುಲ್ಲಾ ಎಂ.ಅಸದ್ ವೇದಿಕೆಯಲ್ಲಿದ್ದರು.

ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಪ್ರಾರ್ಥಿಸಿದರು. ವಿಶ್ರಾಂತ ಪ್ರಾಂಶುಪಾಲರಾದ ಡಾ.ಸಿ.ಶಿವಲಿಂಗಪ್ಪ ಸ್ವಾಗತಿಸಿದರು. ಸಾಹಿತಿ ಹುರಳಿ ಬಸವರಾಜ್ ನಿರೂಪಿಸಿದರು.

ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ, ಜಿ.ಎಸ್.ಉಜ್ಜಿನಪ್ಪ, ಪ್ರೊ.ಹೆಚ್.ಲಿಂಗಪ್ಪ ಸೇರಿದಂತೆ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ಅಪಾರ ಅಭಿಮಾನಿಗಳು ಹಾಗೂ ಕುಟುಂಬದವರು ಗ್ರಂಥ ಲೋಕಾರ್ಪಣೆಯಲ್ಲಿ ಪಾಲ್ಗೊಂಡಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement