ಮಂಗಳೂರು : ಗಡಿನಾಡು ಕಾಸರಗೋಡಿನಲ್ಲಿ ಹಿಂದೂ ಯುವತಿಯ ಲವ್ ಜಿಹಾದ್ ನಡೆದಿದೆ ಎಂಬ ವಿಚಾರ ಭಾರೀ ಸದ್ದು ಮಾಡುತ್ತಿದೆ. ಮುಸ್ಲಿಂ ಲೀಗ್ ನಾಯಕನೇ ಈ ಲವ್ ಜಿಹಾದ್ ಗೆ ಬೆಂಬಲ ನೀಡಿದ್ದಾನೆ ಎಂದು ಕಾಸರಗೋಡಿನ ವಿಎಚ್‌ಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳ ಅರೋಪಿಸಿವೆ. ಕಾಸರಗೋಡಿನ ಬದಿಯಡ್ಕದಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಕಾಸರಗೋಡಿನಲ್ಲಿ ಖಾಸಗಿ ಸಂಸ್ಥೆಯೊಂದರ ಶಿಕ್ಷಕಿಯಾಗಿದ್ದ ಯುವತಿ ನೇಹಾ ಎಂಬಾಕೆ ಏಕಾಏಕಿ ನಾಪತ್ತೆಯಾಗಿದ್ದಳು. ಇದೀಗ ನಾಪತ್ತೆಯಾಗಿದ್ದ ನೇಹಾ ಅನ್ಯಮತೀಯ ಮಿರ್ಶಾದ್ ಎಂಬ ಯುವಕನೊಂದಿಗೆ ಠಾಣೆಗೆ ಹಾಜರಾಗಿದ್ದಾಳೆ. ಇಬ್ಬರನ್ನೂ ಕಾಸರಗೋಡು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಮೇ.23ರಂದು ಮನೆಯಿಂದ ಹೊರಟ ನೇಹಾ ದಿಢೀರ್ ನಾಪತ್ತೆಯಾಗಿದ್ದಳು. ಆ ಬಳಿಕ ಬದಿಯಡ್ಕದ ರಿಜಿಸ್ಟ್ರಾರ್ ಕಚೇರಿ ಬೋರ್ಡ್‌ನಲ್ಲಿ ಇಬ್ಬರ ಭಾವಚಿತ್ರಗಳ ಸಹಿತ ನೋಟಿಸ್ ಪತ್ತೆಯಾಗಿತ್ತು. ನೇಹಾ ಮತ್ತು ಮಿರ್ಶಾದ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಮೇ.27ರಂದು ಬದಿಯಡ್ಕ ಠಾಣೆಗೆ ಜೋಡಿ ಬಂದು ಹಾಜರಾಗಿದೆ. ಸದ್ಯ ಆಕೆ ತಾನು ಸ್ವಇಚ್ಛೆಯಂತೆ ಯುವಕನೊಂದಿಗೆ ತೆರಳಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ. ಕೇರಳದ ಮುಸ್ಲಿಂ ಲೀಗ್ ನೇತಾರ ಷಡ್ಯಂತ್ರ ರೂಪಿಸಿ ಅನ್ಯಮತೀಯ ಯುವಕನೊಂದಿಗೆ ಹಿಂದೂ ಯುವತಿಗೆ ಪ್ರೇಮಾಂಕುರವಾಗುವಂತೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಲವ್ ಜಿಹಾದ್ ನೆಪದಲ್ಲಿ ಹಿಂದೂ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲು ಭಾರೀ ಸಂಚು ರೂಪಿಸಿದ್ದ ಆರೋಪ ಕೇಳಿ ಬಂದಿದೆ. ನೇಹಾಳ ತಂದೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸು ದಾಖಲಿಸಿದ್ದರು. ದೂರಿನಲ್ಲಿ ಯುವತಿಯ ಅಪಹರಣದ ಅನುಮಾನ ವ್ಯಕ್ತಪಡಿಸಿದ್ದರು.