ಬೆಂಗಳೂರು : ಕುಮಾರಸ್ವಾಮಿ, ನಾನು ಕೃಷಿ ಜತೆಗೆ ಉದ್ಯಮವನ್ನು ನಡೆಸುತ್ತಿದ್ದೇನೆ. ನೀನು ಮತ್ತು ನಿಮ್ಮ ಕುಟುಂಬದವರು ಯಾವ ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ಸಂಪಾದಿಸಿದ್ದೀರಿ? ನೀನು ಹಿಟ್ ಅಂಡ್ ರನ್, ಬ್ಲಾಕ್ ಮೇಲರ್ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹರಿಹಾಯ್ದಿದ್ದಾರೆ. ಚನ್ನಪಟ್ಟಣದಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಿವಕುಮಾರ್ ಅವರು, ಕುಮಾರಣ್ಣ ನೀನು ನನ್ನ ಆಸ್ತಿ ಬಗ್ಗೆ ಚರ್ಚೆ ಮಾಡುವ ಬದಲು ಮೊದಲಿನಿಂದಲೂ ಚರ್ಚೆ ಮಾಡು. ನಿನ್ನ ಸಹೋದರ ಬಾಲಕೃಷ್ಣಗೌಡ ಅವರ ಕುಟುಂಬ, ಅವರ ತಂದೆ ಹಾಗೂ ಮೈಸೂರು, ಶ್ರೀರಂಗಪಟ್ಟಣದ ಅವರ ಸಂಬಂಧಿಗಳು, ಬೇನಾಮಿಗಳು ಎಷ್ಟೆಷ್ಟು ಜಮೀನು ಹೊಂದಿದ್ದಾರೆ ಎಂಬ ಬಗ್ಗೆ ನೀವು ರಾಮನಗರದಲ್ಲಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿಗೆ ಇದ್ದಾನೆ. ಯಾವ ಈರುಳ್ಳಿ, ಆಲೂಗಡ್ಡೆಯಲ್ಲಿ ಅದು ಸಂಪಾದನೆ ಆಯ್ತು? ಎಂದು ಲೆಕ್ಕ ಕೊಡಬೇಕು” ಎಂದು ಅವರು ಸವಾಲೆಸೆದಿದ್ದಾರೆ. “ನನ್ನ ಮೇಲೆ, ನನ್ನ ಧರ್ಮಪತ್ನಿ, ನನ್ನ ಸಹೋದರಿ, ನನ್ನ ಸಹೋದರನ ಮೇಲೆ ನೀವು ಕೇಸ್ ದಾಖಲಿಸಿ ಏನು ಮಾಡಿದಿರಿ? ಏನು ಮಾಡಲು ಆಗಿಲ್ಲ. ಮಿಲಿಟರಿಯವರು ಬಂದು ನನ್ನನ್ನು ಕರೆದುಕೊಂಡು ಹೋಗಲಿದ್ದಾರೆ ಎಂದು ನೀನು ಹೇಳಿದ್ದೀಯಾ. ಹಾಗಿದ್ದರೆ ನಾನು ಜೈಲಲ್ಲಿ ಇದ್ದಾಗ ಯಾಕೆ ಬಂದು ನನ್ನನ್ನು ನೋಡಿದೆ? ನನ್ನ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಅದು ಗೊತ್ತಿದೆಯೇ? ನನ್ನ ಕುಟುಂಬದವರ ಮೇಲೆ ಹಾಕಿಸಿದ್ದ ಕೇಸು ವಜಾ ಆಗಿದೆ ಗೊತ್ತಿದೆಯಾ?” ಎಂದು ಕುಟುಕಿದ್ದಾರೆ. “ನಾನು ನಿನ್ನ ಡಿನೋಟಿಫಿಕೇಶನ್ ಪ್ರಕರಣ ಇನ್ನು ಚರ್ಚೆ ಮಾಡಿಲ್ಲ. ನಿನ್ನ ಗಣಿ ಕೇಸ್ ಇನ್ನು ಚರ್ಚೆ ಮಾಡಿಲ್ಲ. ನಿನ್ನ ಕುಟುಂಬದವರ ಆಸ್ತಿ ಇನ್ನು ಬಿಡುಗಡೆ ಮಾಡಿಲ್ಲ. ಪಟ್ಟಿ ಬಿಡುಗಡೆ ಮಾಡುತ್ತೇನೆ” ಎಂದು ಸವಾಲು ಹಾಕಿದ್ದಾರೆ.