ಕುಮಾರಸ್ವಾಮಿಗೂ ಮೊದಲು ಚನ್ನಪಟ್ಟಣ ನೋಡಿದವನು ನಾನು: ಡಿಸಿಎಂ ಡಿ.ಕೆ.ಶಿವಕುಮಾರ್

ಮಂಗಳೂರು: “ಕುಮಾರಸ್ವಾಮಿ ಅವರು ಚನ್ನಪಟ್ಟಣ ನೋಡುವುದಕ್ಕೂ ಮೊದಲೇ ನಾನು ನೋಡಿದ್ದೇನೆ. ಅವರು ತಡವಾಗಿ ರಾಜಕೀಯಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.

ಮಂಗಳೂರಿನ ಬಜಪೆ ವಿಮಾನ ನಿಲ್ದಾಣ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಚನ್ನಪಟ್ಟಣಕ್ಕೆ ನೀವು ಏನೂ ಮಾಡಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಚನ್ನಪಟ್ಟಣಕ್ಕೆ ನಾನು ಏನು ಮಾಡಿದ್ದೇನೆ, ಏನು ಮಾಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿಯವರಿಗೇನು ಗೊತ್ತು? ನಾನು 1985 ರಲ್ಲೇ ಅವರ ತಂದೆ ವಿರುದ್ಧ ಚುನಾವಣೆಗೆ ನಿಂತವನು. ಕುಮಾರಸ್ವಾಮಿ ಅವರು 1995 ರ ಬಳಿಕ ಲೋಕಸಭಾ ಚುನಾವಣೆಗೆ ನಿಂತವರು. ದೊಡ್ಡವರು ಅಧಿಕಾರ ಅನುಭವಿಸಿದರೂ ಚನ್ನಪಟ್ಟಣದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿದೆ. ಅಲ್ಲಿನ ಜನರಿಗೆ ಅಳಿಲು ಸೇವೆ ಮಾಡೋಣ. ಹಿಂದೆ ಮಂತ್ರಿಯಾಗಿದ್ದಾಗ ಸೇವೆ ಮಾಡಿದ್ದೇನೆ. ಈಗ ಉತ್ತಮ ಸಮಯ ಒದಗಿ ಬಂದಿದೆ. ಸಣ್ಣ ಸಹಾಯ ಮಾಡೋಣ ಎಂದು ಕಾರ್ಯಪ್ರವೃತ್ತನಾಗಿದ್ದೇನೆ’ ಎಂದು ಹೇಳಿದರು.

Advertisement

‘ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ತಮ್ಮ ಡಿ.ಕೆ. ಸುರೇಶ್ ಗೆ ಆಸಕ್ತಿಯಿಲ್ಲ. ಜನರು ಸುರೇಶ್ ಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ಆದರೆ ಅವರಿಗೆ ಪಕ್ಷದ ಕೆಲಸ ಮಾಡಬೇಕೆಂಬ ಆಸೆಯಿದೆ. ನಮ್ಮನ್ನು ನಂಬಿ ಚನ್ನಪಟ್ಟಣದ ಜನ 85 ಸಾವಿರ ಮತಕೊಟ್ಟಿದ್ದಾರೆ. ನಮ್ಮನ್ನು ನಂಬಿದ ಜನರ ಕೈ ಬಿಡುವುದಕ್ಕೆ ಆಗುವುದಿಲ್ಲ. ದೇವರಂತ ಜನ ರಾಜ್ಯದಲ್ಲಿ ನಮಗೆ 136 ಸ್ಥಾನ ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ಅದನ್ನು ಜನರ ಅಭಿವೃದ್ಧಿಗೆ ವಿನಿಯೋಗಿಸಬೇಕಿದೆ” ಎಂದರು.

ಹೆಚ್ಚುವರಿ ಡಿಸಿಎಂ ಸ್ಥಾನಗಳ ಬೇಡಿಕೆ ಬಗ್ಗೆ ಉತ್ತರಿಸಿದ ಅವರು, ‘ನೀವು ದಿನವೂ ಈ ಬಗ್ಗೆ ಸುದ್ದಿ ಮಾಡುತ್ತಿದ್ದೀರಿ. ಇದರಿಂದ ಖುಷಿ ಆಗುವವರಿಗೆ ಆಗಲಿ. ಖುಷಿ ಪಡುವವರಿಗೆ ಬೇಡ ಎಂದು ಹೇಳಲು ಆಗುತ್ತದೆಯೇ? ಯಾರು ಏನು ಬೇಕಾದರೂ ಬೇಡಿಕೆ ಇಡಲಿ. ಪಕ್ಷವು ಯಾರಿಗೆ ಏನು ಉತ್ತರ ಕೊಡಬೇಕೋ ಕೊಡುತ್ತದೆ’ ಎಂದರು.

ಪಕ್ಷದಿಂದ ಉತ್ತರ ನೀಡುವ ಆಲೋಚನೆ ಇದೆಯೇ ಎಂದಾಗ “ನಮ್ಮ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಅಥವಾ ಈ ಬಗ್ಗೆ ಮುಖ್ಯಮಂತ್ರಿಗಳನ್ನೇ ಕೇಳಿ” ಎಂದು ಹೇಳಿದರು.

‘ತಮ್ಮ ಮೇಲಿನ ದ್ವೇಷದ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ’ ಎಂಬ ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು ‘ಮೈನಿಂಗ್ ಬಗ್ಗೆ ಹೆಚ್ಡಿಕೆ ಅವರಿಗೆ ತಿಳುವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ನನಗಂತೂ ಆ ಬಗ್ಗೆ ಏನೂ ಗೊತ್ತಿಲ್ಲ’ ಎಂದರು.

ಕುಕ್ಕೆ ಸುಬ್ರಹ್ನಣ್ಯ ಕ್ಷೇತ್ರಕ್ಕೆ ಭೇಟಿ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು, ‘ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ ಸಂಸ್ಕೃತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವರು. ಬಹಳ ದಿನದಿಂದ ಸುಬ್ರಹ್ಮಣ್ಯಕ್ಕೆ ಹೋಗಬೇಕೆಂಬ ಆಸೆಯಿತ್ತು. ಆದ ಕಾರಣ ಕುಟುಂಬ ಸಮೇತ ಹೋಗುತ್ತಿದ್ದೇನೆ. ಅವರವರ ನಂಬಿಕೆ ಪ್ರಕಾರ ಅವರು ಪ್ರಾರ್ಥಿಸುತ್ತಾರೆʼ ಎಂದು ಹೇಳಿದರು.

ಕುಕ್ಕೆ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆ ಬಗ್ಗೆ ಕೇಳಿದಾಗ “ಈ ಪ್ರಸ್ತಾವನೆ ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ಕಾರ್ಯಕರ್ತರ ಅಭಿಪ್ರಾಯ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುತ್ತದೆ. ದೇವಾಸ್ಥಾನದ ಗೌರವ, ಘನತೆ ಉಳಿಸಿಕೊಂಡು ಹೋಗಲಾಗುವುದು” ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣರದಲ್ಲಿ ಮಾಜಿ ಶಾಸಕ ಪೀತಂಗೌಡ ವಿರುದ್ಧ ಎಫ್ ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ “ಇದರ ಬಗ್ಗೆ ನನಗೆ ಗೊತ್ತಿಲ್ಲ. ಮಂಗಳೂರಿನಲ್ಲಿ ಮಲಗಿದ್ದವನು ಈಗ ಎದ್ದಿದ್ದೇನೆ. ನನಗೆ ಏನು ಗೊತ್ತಿಲ್ಲ” ಎಂದರು.

ಬಿಜೆಪಿಯವರು ಕೆಲಸ ಮಾಡದೇ ಇದ್ದರು ಮತ ಹಾಕುತ್ತಿದ್ದೀರಿ

ಭಕ್ತಾಧಿಗಳು ಹಾಗೂ ಸಾರ್ವಜನಿಕರಿಗೆ ಸುಬ್ರಮಣ್ಯದಲ್ಲಿ ಉತ್ತಮ ಆಸ್ಪತ್ರೆಯಿಲ್ಲ ಎಂದಾಗ “ಇದೇ ಪ್ರಶ್ನೆಯನ್ನು ಬಿಜೆಪಿಯವರಿಗೆ ಕೇಳಿದ್ದೀರಾ? ಎಂದು ಮರುಪ್ರಶ್ನಿಸಿದರು. “ಕೇಳಿದ್ದೇವೆ ಮಾಡಿಲ್ಲ ಎಂದು ಮಾಧ್ಯಮದವರು ಹೇಳಿದಾಗ “ಅವರನ್ನು ಕೇಳುತ್ತಿದ್ದೀರಾ. ಅವರ ಕೈಯಲ್ಲಿ ಮಾಡಲು ಆಗಿಲ್ಲ. ಆದರೂ ಅವರನ್ನೇ ಗೆಲ್ಲಿಸುತ್ತಿದ್ದೀರಾ. ಅವರು ಅನುಕೂಲ ಮಾಡಿಲ್ಲ ಆದರೂ ಮತ ಹಾಕುತ್ತೀರಾ. ನಾವು ಕೆಲಸ ಮಾಡಿದರೆ ನಮಗೆ ಮತ ಹಾಕುತ್ತೀರಿ ಎಂದರ್ಥವೇ? ದಿನೇಶ್ ಗುಂಡುರಾವ್ ಅವರು ಆರೋಗ್ಯ ಸಚಿವರಿದ್ದು, ಅವರ ಬಳಿ ಚರ್ಚೆ ನಡೆಸಲಾಗುವುದು” ಎಂದರು.

ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ

ಅರಣ್ಯ ಭೂಮಿಯಲ್ಲಿ ವಾಸಿಸುವವರಿಗೆ ಹಕ್ಕು ಪತ್ರ ನೀಡುವ ವಿಚಾರವಾಗಿ ಕೇಳಿದಾಗ “ಅರಣ್ಯ ಭೂಮಿಯಲ್ಲಿ ಅನೇಕ ವರ್ಷಗಳಿಂದ ವ್ಯವಸಾಯ ಹಾಗೂ ವಾಸ ಮಾಡುತ್ತಿದ್ದಾರೆ. ಇವರಿಗೆ ಕಾಂಗ್ರೆಸ್ ಸರ್ಕಾರ ತೊಂದರೆ ನೀಡಲು ಹೋಗುವುದಿಲ್ಲ. ಯಾರನ್ನೂ ಹೊರಗೆ ಹಾಕುವುದಿಲ್ಲ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಬುಡಕಟ್ಟು ಸಮುದಾಯಕ್ಕೆ ಎಂದೇ ಕಾನೂನು ರೂಪಿಸಿವೆ. ಓಬಿಸಿ, ಜನರಲ್ ಮತ್ತು ಎಸ್ಇ ಗಳಿಗೆ 75 ವರ್ಷ ಇದ್ದವರಿಗೆ ಹಾಗೂ 25 ವರ್ಷ ಬುಡಕಟ್ಟು ಸಮುದಾಯಕ್ಕೆ ನೀಡಬೇಕು ಎಂದು ತೀರ್ಮಾನವಾಗಿದೆ. ಇದರಲ್ಲಿ ತಾರತಮ್ಯವಾಗಿದೆ ಎಂದು ಒಂದಷ್ಟು ಜನ ಹೇಳಿದ್ದಾರೆ. ಇದರ ಬಗ್ಗೆ ಸಿಎಂ ಬಳಿ ಚರ್ಚೆ ನಡೆಸಲಾಗುವುದು. ಬುಡಕಟ್ಟು ಸಮುದಾಯಕ್ಕೆ ಆಕ್ಟ್ ಮಾಡಿದಂತೆ ಇತರೇ ಜನಾಂಗಗಳಿಗೂ ರಕ್ಷಣೆ ನೀಡುವಂತೆ ತಿದ್ದುಪಡಿ ಮಾಡಿ ದೆಹಲಿಗೆ ಕಳುಹಿಸಿದ್ದೇವೆ. ಅವರು ತೀರ್ಮಾನ ಮಾಡಬೇಕು” ಎಂದು ಹೇಳಿದರು.

ನಂದಿನಿ ಹಾಲಿನ ದರ ಹೆಚ್ಚಳ ಮಾಡಿರುವ ಬಗ್ಗೆ ಕೇಳಿದಾಗ “ನೀರಿನ ಬೆಲೆಯೂ 25 ರೂಪಾಯಿ ಆಗಿದೆ. ರೈತರಿಗೆ ಸಿಗುವ ಹಾಲಿನ ಬೆಲೆ ಕಡಿಮೆಯಿದೆ. ಅದಕ್ಕೆ ರೈತರ ಒತ್ತಾಯದ ಮೇರೆಗೆ ಬೆಲೆ ಏರಿಕೆ ಮಾಡಲಾಗಿದೆ. ಹುಲ್ಲಿನ ಬೆಲೆ, ಪಶು ಆಹಾರ ಬೆಲೆ ಹೆಚ್ಚಳವಾಗಿದೆ. ಅನೇಕ ಹಾಲು ಉತ್ಪಾದಕ ಸಂಘಗಳು ಗಲಾಟೆ ಮಾಡುತ್ತಿದ್ದವು. ಅದಕ್ಕೆ ಈ ತೀರ್ಮಾನ ಮಾಡಲಾಗಿದೆ” ಎಂದರು.

ರಾಜ್ಯಕ್ಕೆ ಒಳ್ಳೆಯದಾಗಲಿ ಎಲ್ಲರಿಗೂ ಸುಖ, ಶಾಂತಿ ಸಿಗಲಿ ಎಂದು ಪ್ರಾರ್ಥನೆ

ಕುಕ್ಕೆ ಸುಬ್ರಮಣ್ಯ ಸ್ವಾಮಿಯನ್ನು ಕುಟುಂಬ ಸಮೇತ ದರ್ಶನ ಮಾಡಿದೆ. ಈ ರಾಜ್ಯಕ್ಕೆ ಸುಖ, ಶಾಂತಿ ನೆಮ್ಮದಿ ದೊರಕಲಿ ಜೊತೆಗೆ ನನಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಮಳೆ ಸ್ವಲ್ಪ ಕಡಿಮೆಯಾಗಿದೆ. ಇನ್ನೂ ಉತ್ತಮವಾಗಿ ಮಳೆ ಬೀಳಬೇಕು” ಎಂದು ಹೇಳಿದರು.

“ತಮಿಳುನಾಡಿನವರು ಈಗಾಗಲೇ ನೀರಿಗಾಗಿ ಬೇಡಿಕೆ ಇಡುತ್ತಿದ್ದಾರೆ. ಆದ ಕಾರಣ ಮಳೆ ಇನ್ನೂ ಉತ್ತಮವಾಗಿ ಸುರಿದು ಅಣೆಕಟ್ಟುಗಳು ಭರ್ತಿಯಾಗಲಿ, ದೊಡ್ಡ ಸಮಸ್ಯೆಗಳು ಬಗೆಹರಿಯಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ” ಎಂದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement