ನವದೆಹಲಿ: ಭಾರತದಲ್ಲಿ ದಶಕಗಳಿಂದ ಜನರು ಧರಿಸುತ್ತಿರುವ ಹವಾಯಿ ಚಪ್ಪಲಿ 400ರ ಗಡಿ ದಾಟಿಲ್ಲ. ಇದೀಗ ಅದೇ ಹವಾಯಿ ರೀತಿಯ ಚಪ್ಪಲಿಗೆ 1 ಲಕ್ಷ ರೂಪಾಯಿ ಆಗಿದೆ. ಆದರೆ ಅದು ನಮ್ಮ ದೇಶದಲ್ಲಿ ಅಲ್ಲ. ಕುವೈಟ್‌ನಲ್ಲಿ.
ಭಾರತದಲ್ಲಿ ದಿನನಿತ್ಯದ ಓಡಾಟಕ್ಕೆ ಬಳಸುವ ಹವಾಯಿ ಚಪ್ಪಲಿಯಂತೆ ಕಾಣುವ ಈ ಚಪ್ಪಲಿಗೆ ಕುವೈಟ್‌ನಲ್ಲಿ 4,590 ರಿಯಾಲ್. ಅಂದರೆ 1 ಲಕ್ಷ ರೂಪಾಯಿ ಆಗಿದೆ. ಆದರೆ ಅದೇ 1 ಲಕ್ಷ ರೂ. ಗೆ ಭಾರತದಲ್ಲಿ ನೂರಾರು ಹವಾಯಿ ಚಪ್ಪಲಿಗಳನ್ನು ಕೊಂಡುಕೊಳ್ಳಬಹುದಾಗಿದೆ ಎಂಬುದು ವಿಪರ್ಯಾಸ. ಇದೀಗ ಈ ಚಪ್ಪಲಿಯ ಬೆಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಚಪ್ಪಲಿಯನ್ನು ಕುವೈಟ್‌ನ ಸ್ಟೋರ್ ಒಂದರಲ್ಲಿ ಮಾರಾಟ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಶೇರ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್ ನಲ್ಲಿ ಕುವೈಟ್‌ನ ಸ್ಟೋರ್ ಒಂದರಲ್ಲಿ ಸುಮಾರು 4,590 ರಿಯಾಲ್ ಗೆ ಚಪ್ಪಲಿಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ‘ಬಾತ್ ರೂಂಗೆ ಹಾಕುವ ಈ ಚಪ್ಪಲಿಗೆ 1 ಲಕ್ಷ ರೂಪಾಯಿ ಕೊಟ್ಟು ಕೊಂಡುಕೊಳ್ಳಬೇಕಾ’ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಒಬ್ಬರು ‘ಈ ಚಪ್ಪಲಿಯನ್ನು ಶ್ರೀಮಂತರಿಗಾಗಿ ಮಾತ್ರ ಮಾರಾಟ ಮಾಡಲಾಗುತ್ತಿದೆ’ ಎಂದು ಹೇಳಿದರೆ, ಇನ್ನೊಬ್ಬರು ‘4,590 ರಿಯಾಲ್ ಕೊಟ್ಟು ಈ ಚಪ್ಪಲಿಗಳನ್ನು ಒಮ್ಮೆ ಖರೀದಿ ಮಾಡಿದರೆ ಇಡೀ ಜೀವನದುದ್ದಕ್ಕೂ ಶೌಚಾಲಯಕ್ಕೆ ಹೋಗಲು ಅದನ್ನೇ ಬಳಸಬೇಕಾಗುತ್ತದೆ’ ಎಂದು ಬರೆದಿದ್ದಾರೆ.
ಇನ್ನು ಕೆಲವರು ‘ಇದು ನಮ್ಮ ಕುಟುಂಬದಲ್ಲಿ ಬಾತ್ ರೂಂಗೆ ಹೋಗಲು ಬಳಸುವ ಚಪ್ಪಲಿಗಳು’ ಎಂದರೆ, ಮತ್ತೊಬ್ಬರು ‘ಭಾರತದಲ್ಲಿ ನಿಮಗೆ ಈ ಚಪ್ಪಲಿಗಳು 60 ರೂಪಾಯಿಗೆ ಸಿಗುತ್ತದೆ’, ‘ಭಾರತದಲ್ಲಿ ನಾವು ಇದನ್ನು ಹೆಚ್ಚಾಗಿ ಶೌಚಾಲಯಕ್ಕೆ ಹೋಗಲು ಬಳಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ ‘ಇದು ನಿಜವಾಗಿಯೂ ತಾಯಂದಿರ ದಿನದ ಅತ್ಯುತ್ತಮ ಉಡುಗೊರೆಯಾಗಿದೆ. ಯಾಕೆಂದರೆ ಎಲ್ಲಾ ತಾಯಂದಿರಿಗೆ ಚಪ್ಪಲಿ ಅತ್ಯುತ್ತಮ ಆಯುಧ’ ಎಂದು ಕಮೆಂಟ್ ಗಳನ್ನು ಮಾಡಿದ್ದಾರೆ.