ಕುವೈಟ್: ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಕುವೈತ್‌ನಲ್ಲಿ ನಡೆದಿದೆ.
ಕೇರಳದ ಮ್ಯಾಥ್ಯೂ ಮುಲಕಲ್, ಅವರ ಪತ್ನಿ ಲಿನಿ ಅಬ್ರಹಾಂ, ಮತ್ತು ಅವರ ಇಬ್ಬರು ಮಕ್ಕಳಾದ ಐಸಾಕ್ ಮತ್ತು ಐರಿನ್ ಅವಘಡದಲ್ಲಿ ಸಾವನ್ನಪ್ಪಿದ್ದಾರೆ.
ಮ್ಯಾಥ್ಯೂ ಅವರು ಉದ್ಯೋಗಕ್ಕಾಗಿ ಕುವೈತ್‌ನ ಅಬ್ಬಾಸಿಯಾದಲ್ಲಿ ಕಳೆದ 15 ವರ್ಷದಿಂದ ಕುಟುಂಬದೊಂದಿಗೆ ನೆಲೆಸಿದ್ದರು. ಶುಕ್ರವಾರ ರಾತ್ರಿ ಅವರು ಮಲಗುವ ಕೋಣೆಯಲ್ಲಿ ಸಂಭವಿಸಿದ ಎ.ಸಿಯ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ. ಮೃತದೇಹಗಳನ್ನು ಭಾರತಕ್ಕೆ ಯಾವಾಗ ತರಲಾಗುತ್ತದೆ ಎಂಬ ಮಾಹಿತಿ ನಮಗೆ ಇನ್ನೂ ದೊರೆತಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಕೊಚ್ಚಿ ಬಳಿ ನೆಡುಂಬಸ್ಸರಿ ಮೂಲದವರಾದ ಮ್ಯಾಥ್ಯೂ ಮುಲಕಲ್ ಅವರು ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಕಳೆದ ಗುರುವಾರವಷ್ಟೇ ಅವರು ತಮ್ಮ ಮಕ್ಕಳು ಹಾಗೂ ಪತ್ನಿಯೊಂದಿಗೆ ರಜೆ ಮುಗಿಸಿಕೊಂಡು ಕುವೈತ್‌ಗೆ ತೆರಳಿದ್ದರು ಎನ್ನಲಾಗಿದೆ.