ಚಿತ್ರದುರ್ಗ : ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ಮಹತ್ವದ ತೀರ್ಪಿನನ್ವಯ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳಿಗೆ ಒಳ ಮೀಸಲಾತಿಯನ್ನು ತಕ್ಷಣವೇ ನೀಡಬೇಕೆಂದು ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕøತಿಕ ಸಂಘದ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಒತ್ತಾಯಿಸಿದರು.
ಒಳ ಮೀಸಲಾತಿ ಕುರಿತು ಸ್ವತಂತ್ರ ಹೋರಾಟಕ್ಕೆ ಸಜ್ಜಾಗಲು ಸ್ಟೇಡಿಯಂ ಸಮೀಪವಿರುವ ಕ್ರೀಡಾ ಭವನದಲ್ಲಿ ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕøತಿಕ ಸಂಘ ಹಾಗೂ ಸಾಮಾಜಿಕ ಸಂಘರ್ಷ ಸಮಿತಿ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಬದಲು ಪಕ್ಷದ ಹೈಕಮಾಂಡ್ ಹೆಗಲಿಗೆ ವಹಿಸಲು ಗಮನ ಕೊಡುತ್ತಿದೆ. ಮಾದಿಗ ರಾಜಕಾರಣಿಗಳು ಒಳ ಮೀಸಲಾತಿಗಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಬದಲು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿ ಅಧಿಕಾರದಿಂದ ಹೊರ ಬರುವುದು ಒಳ್ಳೆಯದೆಂಬ ಸಲಹೆ ನೀಡಿದರು.
ಒಳ ಮೀಸಲಾತಿಗಾಗಿ ಕಳೆದ ಮೂವತ್ತು ವರ್ಷಗಳಿಂದಲೂ ನಡೆಯುತ್ತಿರುವ ಹೋರಾಟಕ್ಕೆ ಸುಪ್ರಿಂಕೋರ್ಟ್ ತೀರ್ಪಿನಿಂದ ಜಯ ಸಿಕ್ಕಂತಾಗಿದೆ. ಆದರೆ ಸರ್ಕಾರ ನಡೆಸುವ ರಾಜಕಾರಣಿಗಳು ಶೀಘ್ರವೇ ಜಾರಿಗೊಳಿಸುವ ಇಚ್ಚಾಶಕ್ತಿಯನ್ನು ತೋರಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕøತಿಕ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಹಿರೇಹಳ್ಳಿ ಮಾತನಾಡಿ ಕಳೆದ ಮೂರು ದಶಕಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ನಡೆದುಕೊಂಡು ಬರುತ್ತಿದೆ. ಅಧಿಕಾರವಿಲ್ಲದಿದ್ದಾಗ ಒಳ ಮೀಸಲಾತಿಗಾಗಿ ಕೂಗುವವರು ಅಧಿಕಾರ ಕೈಗೆ ಸಿಕ್ಕಾಗೆ ಧ್ವನಿ ಎತ್ತುವ ಬದಲು ಸೈಲೆಂಟ್ ಆಗಿ ತಮ್ಮ ಕುರ್ಚಿ ಉಳಿಸಿಕೊಳ್ಳುವುದರ ಕಡೆಗಷ್ಟೆ ಗಮನ ಕೊಡುತ್ತಿರುವುದು ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸ್ವತಂತ್ರ ಹೋರಾಟಗಾರರನ್ನು ಒಂದು ವೇದಿಕೆಗೆ ಕರೆ ತಂದು ಒಳ ಮೀಸಲಾತಿಯನ್ನು ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಗುಲ್ಬರ್ಗದ ಕಟ್ಟಿಮನಿ ಮಾತನಾಡಿ ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಸುಪ್ರಿಂಕೋರ್ಟ್ ಆಯಾ ರಾಜ್ಯಗಳಿಗೆ ವಹಿಸಿ ತೀರ್ಪು ಹೊರಡಿಸಿದ್ದರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ಣಯ ಕೈಗೊಳ್ಳಲು ಖರ್ಗೆ ನೇತೃತ್ವದ ಸಮಿತಿಗೆ ವಹಿಸಿರುವುದು ಅತ್ಯಂತ ಖಂಡನೀಯ ಎಂದು ಅಸಮಾನಧಾನ ವ್ಯಕ್ತಪಡಿಸಿದರು.
ಪ್ರಧಾನ ಸಂಚಾಲಕ ಎನ್.ಮಾರಪ್ಪ, ಡಿ.ದುರುಗೇಶಪ್ಪ, ಕೆ.ಟಿ.ರಂಗಯ್ಯ, ನಂಜುಂಡ ಮೌರ್ಯ, ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಕೆ.ಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಣ್ಣ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.