ತಲೆ ತುಂಬಾ ಕೂದಲು ಇರಬೇಕೆಂಬುದು ಬಹುತೇಕ ಎಲ್ಲರ ಮಹಿಳೆಯರ ಹೆಬ್ಬಯಕೆ. ಹೊರಗಿನಿಂದ ವಸ್ತುಗಳನ್ನು ತರದೆ ಅಡುಗೆ ಮನೆಯ ಪದಾರ್ಥಗಳಿಂದಲೇ ನಿಮ್ಮ ಕೂದಲಿನ ಆರೋಗ್ಯವನ್ನು ವೃದ್ಧಿಸಬಹುದು. ಮನೆಯ ಹಿತ್ತಲಲ್ಲಿ ಅಲೋವೇರಾ ಇದ್ದರೆ ವಾರಕ್ಕೊಮ್ಮೆ ಇದರ ರಸವನ್ನು ಹಿಂಡಿ ತಲೆಗೆ ಹಚ್ಚಿಕೊಂಡರೆ ಕೂದಲು ಕಪ್ಪಾಗಿಯೂ, ಉದ್ದವಾಗಿಯೂ ಬೆಳೆಯುತ್ತದೆ. ಸ್ನಾನಕ್ಕೆ ಮೊದಲು ತೆಂಗಿನೆಣ್ಣೆ ಹಚ್ಚಿ ಸರಿಯಾಗಿ ಮಸಾಜ್ ಮಾಡಿ. ದಾಸವಾಳದ ಎಲೆ, ಬೇವಿನ ಎಲೆಯನ್ನು ಸೇರಿಸಿ ತೆಂಗಿನೆಣ್ಣೆ ಬಿಸಿ ಮಾಡಿಕೊಂಡಿರಿ. ಒಮ್ಮೆ ತಯಾರಿಸಿದರೆ ಇದು ೬ ತಿಂಗಳವರೆಗೆ ಕೆಡದು.ಸ್ನಾನಕ್ಕೆ ೨೫ ನಿಮಿಷಗಳ ಮೊದಲು ಎಣ್ಣೆಗೆ ನಿಂಬೆರಸ ಬೆರೆಸಿ ಹಚ್ಚಿಕೊಳ್ಳಿ. ಹದವಾದ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ತಲೆಯ ಹೊಟ್ಟನ್ನು ಇದು ನಿವಾರಿಸುತ್ತದೆ. ನೀರುಳ್ಳಿ ರಸ ಕೂದಲು ಬೆಳೆಯಲು ಸಹಕಾರಿ ಎಂಬುದನ್ನು ಸಂಶೋಧನೆಗಳು ತೋರಿಸಿಕೊಟ್ಟಿವೆ. ಇದು ಪೋಷಕಾಂಶದ ಜೊತೆಗೆ ರಕ್ತದ ಚಲನೆಯನ್ನು ಹೆಚ್ಚಿಸುತ್ತದೆ. ಇದನ್ನು ಹಚ್ಚಿ ೧೫ ನಿಮಿಷಗಳ ಬಳಿಕ ಸ್ನಾನ ಮಾಡಿ. ಕೊತ್ತಂಬರಿ ಸೊಪ್ಪ ಕೂದಲಿನ ಬೆಳವಣಿಗೆಗೆ ಕೂಡ ಉತ್ತಮವಾಗಿದೆ. ಹಾಗಾಗಿ ಕೂದಲಿನ ಆರೋಗ್ಯಕ್ಕಾಗಿ ಕೊತ್ತಂಬರಿ ಸೊಪ್ಪನ್ನು ಈ ರೀತಿಯಲ್ಲಿ ಬಳಸಿ.ಕೊತ್ತಂಬರಿ ಸೊಪ್ಪನ್ನು ಸ್ವಲ್ಪ ನೀರು ಬೆರೆಸಿ ಪೇಸ್ಟ್ ಮಾಡಿ ನೆತ್ತಿಗೆ ಹಚ್ಚಿ 20 ನಿಮಿಷ ಬಿಟ್ಟು ಕೂದಲನ್ನು ವಾಶ್ ಮಾಡಿ, ಇದನ್ನು ವಾರಕ್ಕೆ 2 ಬಾರಿ ಮಾಡಿ.ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು 15 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ ಬಾಟಲಿನಲ್ಲಿ ಸಂಗ್ರಹಿಸಿ ಇಡಿ. ಈ ನೀರನ್ನು ಕೂದಲಿನ ಬುಡಕ್ಕೆ ಹಚ್ಚಿ 15 ನಿಮಿಷ ಮಸಾಜ್ ಮಾಡಿ. ಬಳಿಕ ಕೂದಲನ್ನು ಶಾಂಪೂ ಬಳಸಿ ವಾಶ್ ಮಾಡಿ ಇದು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.