ಚಿತ್ರದುರ್ಗ: ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದು ಸ್ಥಳದಲ್ಲಿ ಕೃಷಿ ಹೊಂಡ ತೆಗೆದು, ಜಲ ಸಂಗ್ರಹಸಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಮರುಜಾರಿಗೊಳಿಸಿದೆ. ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕಿನ ರೈತರು ಯೊಜನೆ ಲಾಭ ಪಡೆದುಕೊಳ್ಳಬಹುದು.
ಕೃಷಿಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಜಾರಿಗೆ ತರಲಾಗಿದೆ. ಕೃಷಿ ಹೊಂಡದ 6 ಘಟಕಗಳ ನಿರ್ಮಾಣಕ್ಕೆ ವಿವಿಧ ರೀತಿಯಲ್ಲಿ ಸಹಾಯಧನ ಒದಗಿಸಲಾಗುವುದು. ಕ್ಷೇತ್ರ ಬದು, ಕೃಷಿ ಹೊಂಡ ಹಾಗೂ ಪಾಲಿಥೀನ್ ಹೊದಿಕೆಗೆ ಸಾಮಾನ್ಯ ವರ್ಗದವರಿಗೆ ಶೇ.80 ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.90ರಷ್ಟು, ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿಮಾರ್ಣಕ್ಕೆ ಸಾಮಾನ್ಯ ವರ್ಗದವರಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.50ರಷ್ಟು, 10 ಹೆಚ್.ಪಿ. ಸಾಮರ್ಥ್ಯದ ನೀರು ಎತ್ತುವ ಪಂಪ್ ಸೆಟ್‌ಗಳಿಗೆ ಸಾಮಾನ್ಯ ವರ್ಗದವರಿಗೆ ಶೇ.50 ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.90ರಷ್ಟು, ತುಂತುರು ನೀರಾವರಿ ಘಟಕಕ್ಕೆ ಎಲ್ಲಾ ರೈತರಿಗೂ ಶೇ.90 ರಷ್ಟು ಸಹಾಯಧನ ನೀಡಲಾವುದು. ಕನಿಷ್ಟ 1 ಎಕರೆ ಸಾಗುವಳಿ ಭೂಮಿ ಹೊಂದಿರುವ ರೈತರು ಯೋಜನೆ ಸಮಗ್ರ ಉಪಯೋಗವನ್ನು ಪಡೆದುಕೊಳ್ಳಬಹುದು. ಡಿ.31 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಆಸಕ್ತರು ಚಿತ್ರದುರ್ಗ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ, ತಾಲ್ಲೂಕ ಮಟ್ಟದ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಪಕ್ರಟಣೆಯಲ್ಲಿ ತಿಳಿಸಿದೆ
 
				 
         
         
         
															 
                     
                     
                     
                    


































 
    
    
        