ಹೊಸಪೇಟೆ:ವಿಜಯನಗರ ಜಿಲ್ಲೆಯ ರೈತರು `ಕೃಷಿ ನವೋದ್ಯಮ’ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ ಮುದಗಲ್ ಅವರು ತಿಳಿಸಿದ್ದಾರೆ.
2023-24ರ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು “ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬAಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು `ನವೋದ್ಯಮʼ ಎಂಬ ಹೊಸ ಯೋಜನೆಯನ್ನು ಘೋಷಿಸಿರುತ್ತಾರೆ.
ಯೋಜನೆಯ ಗುರಿ:
ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಹಾಗೂ ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣವನ್ನು ಉತ್ತೇಜಿಸಲು ಕೃಷಿ ನವ್ಯೋದ್ಯಮ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಉದ್ದೇಶಗಳು:
ಕೃಷಿಯಲ್ಲಿನ ನವೀನ ತಾಂತ್ರಿಕತೆಗಳು ಹಾಗೂ ನೂತನ ಪರಿಕಲ್ಪನೆಗಳಿಂದ ಕೃಷಿಯಲ್ಲಿ ನವೋದ್ಯಮಗಳನ್ನು ಪ್ರಾರಂಭಿಸಿ ಕೃಷಿ ವಲಯದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವುದು. ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಆಸಕ್ತ ಪ್ರಗತಿಪರ ರೈತರು ಕೃಷಿಯಲ್ಲಿ ನವೋದ್ಯಮ ಆರಂಭಿಸಿಸಲು ಸಹಾಯ ನೀಡಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಜನೆ ಮಾಡುವುದು.
ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಅಭಿವೃದ್ಧಿಪಡಿಸಲಾದ ನೂತನ ಆವಿಷ್ಕಾರಗಳು ಹಾಗೂ ತಾಂತ್ರಿಕತೆಗಳ ವಾಣಿಜ್ಯೀಕರಣವನ್ನು ಉತ್ತೇಜಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.
ಯೋಜನೆಯ ಕಾರ್ಯವ್ಯಾಪ್ತಿ:
ರೈತರ ನೂತನ ಪರಿಕಲ್ಪನೆಗಳಿಗೆ ಉತ್ತೇಜನ ನೀಡಿ ಕೃಷಿಯೊಂದಿಗೆ ಉದ್ಯಮಿಗಳಾಗಿ ಪರಿವರ್ತನೆ ಹೊಂದುವAತೆ ಹಾಗೂ ರೈತರ ಆದಾಯ ವೃದ್ಧಿಸುವಲ್ಲಿ ಸಹಕಾರಿಯಾಗುವಂತೆ ರಾಜ್ಯಾದ್ಯಂತ ಕೃಷಿ ವಲಯದಲ್ಲಿ ನೂತನ ಆವಿಷ್ಕಾರಗಳು, ನವೀನ ಉತ್ಪನ್ನಗಳು ಹಾಗೂ ಸೇವೆಗಳನ್ನು ಒಳಗೊಂಡಿರುವ ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡಲಾಗುವುದು.
ಆರ್ಥಿಕ ನೆರವು:
ಹೊಸ ಕೃಷಿ ನವೋದ್ಯಮಗಳಿಗೆ ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆಯೊಂದಿಗೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಅನುಮೋದಿತ ಯೋಜನಾ ವರದಿಯ ಶೇ.50ರಷ್ಟು ಸಹಾಯಧನವನ್ನು (ಕನಿಷ್ಠ ರೂ. 5 ಲಕ್ಷದಿಂದ ಗರಿಷ್ಠ ರೂ. 20 ಲಕ್ಷಗಳವರೆಗೆ) ಬ್ಯಾಂಕ್ ಸಾಲದ ಮುಖಾಂತರ ಆರ್ಥಿಕ ನೆರವು ನೀಡಲಾಗುವುದು.
ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೇರಿಸಲು ಕೃಷಿ ವಲಯದಲ್ಲಿ ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆಗಾಗಿ ಹಾಗೂ ಉನ್ನತೀಕರಣಕ್ಕಾಗಿ ಯೋಜನಾ ವರದಿಯ ಶೇ.50ರಷ್ಟು ಸಹಾಯಧನವನ್ನು (ಕನಿಷ್ಠ ರೂ. 20 ಲಕ್ಷದಿಂದ ಗರಿಷ್ಠ ರೂ. 50 ಲಕ್ಷಗಳವರೆಗೆ) ಕೃಷಿ ವಲಯದ ನವೋದ್ಯಮಿಗಳಿಗೆ ಬ್ಯಾಂಕ್ ಸಾಲದ ಮುಖಾಂತರ ಆರ್ಥಿಕ ನೆರವು ನೀಡಲಾಗುವುದು.
ಕೃಷಿ ನವೋದ್ಯಮಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮದಡಿ ಆಯ್ಕೆಯಾದ ನವೋದ್ಯಮಿಗಳ ಸಾಮರ್ಥ್ಯಾಭಿವೃದ್ಧಿಗೆ ಕೃಷಿ ವಿಶ್ವವಿದ್ಯಾಲಯ, ಐ.ಸಿ.ಎ.ಆರ್., ಸಿ.ಎಫ್.ಟಿ.ಆರ್.ಐ., ಸಿ.ಎಸ್.ಐ.ಆರ್., ಸಿ-ಸಿಎಎಂಪಿ ಹಾಗೂ ಇತರೆ ಸಂಶೋಧನಾ ಸಂಸ್ಥೆಗಳಾದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಸ್ಥಾಪಿತವಾಗಿರುವ ಕೃಷಿ ನಾವೀನ್ಯತೆಗಾಗಿ ಶ್ರೇಷ್ಠತೆಯ ಕೇಂದ್ರಗಳ ಮೂಲಕ ತರಬೇತಿಗಳನ್ನು ನೀಡಲಾಗುವುದು.
ನೋಂದಣಿ ಹಾಗೂ ಅರ್ಜಿ ಸಲ್ಲಿಸುವಿಕೆ:
ಅರ್ಜಿ ನಮೂನೆ ಹಾಗೂ ಇತರೆ ಸಂಬAಧಿತ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ (ವಿ.ತ) ಬಿ.ಮಹಮ್ಮದ್ ಹಾರೂನ್ ರಷೀದ್ ಮೊ: 8277929662, ಇವರನ್ನು ಸಂಪರ್ಕಿಸಬಹುದಾಗಿದೆ.