ಹೊಸಪೇಟೆ: ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಭಾಗ್ಯ ಯೋಜನೆಯು ಅತ್ಯಂತ ಜನಪ್ರಿಯ ಹಾಗೂ ಉಪಯುಕ್ತವಾಗಿತ್ತು. ಈ ಯೋಜನೆಯನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ರೂ. ವೆಚ್ಚದಲ್ಲಿ ಮರು ಜಾರಿಗೊಳಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.
ಪ್ರಸ್ತುತ ವರ್ಷದಲ್ಲಿ ವಿಜಯನಗರ ಜಿಲ್ಲೆಯ ಒಟ್ಟು 6 ತಾಲ್ಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಸಾಮಾನ ವರ್ಗದ ರೈತರಿಗೆ ಶೇ.80ರಷ್ಟು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಶೇ.90ರಷ್ಟು ಸಹಾಯಧನದಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ.
ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು. ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು. ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.
ಅರ್ಜಿ ಸಲ್ಲಿಸಲು ರೈತರ ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್‌ನಲ್ಲಿ ಕನಿಷ್ಠ 1 ಎಕರೆ ಇರಬೇಕು. ಹಿಂದಿನ ಸಾಲುಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಥವಾ ಯಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ. ಆಯ್ಕೆಯಾದ ಜಿಲ್ಲೆ, ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ ಫಲಾನುಭವಿ ರೈತರನ್ನು ಆಯ್ಕೆ ಮಾಡಲಾಗುವುದು.
ಆಸಕ್ತ ರೈತರು ಅರ್ಜಿ ನಮೂನೆಯನ್ನು ಸಂಬಂಧಿಸಿದ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಡಿ.31 ರೊಳಗಾಗಿ ಸಲ್ಲಿಸಬೇಕು. ಯೋಜನೆ ಸಂಪೂರ್ಣ ವಿವರ, ಅರ್ಹತೆಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬAಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ ಮುದಗಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*-*-*-