ಚಿತ್ರದುರ್ಗ: ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಪದವಿ ವಿದ್ಯಾರ್ಥಿಗಳನ್ನು ತಯಾರು ಮಾಡುವುದರ ಜೊತೆಗೆ, ಸಂಶೋಧನೆ ಹೆಚ್ಚಿನ ಒತ್ತು ನೀಡಬೇಕು. ಹವಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ, ಬರ ಸಹಿಷ್ಣುತೆ ಹಾಗೂ ರೋಗ ನಿರೋಧಕ ಶಕ್ತಿವುಳ್ಳ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂ ಆವರಣದಲ್ಲಿ ಶುಕ್ರವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇವರ ವತಿಯಿಂದ ಆಯೋಜಿಸಲಾದ ಬಬ್ಬರೂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭ ಹಾಗೂ ಸಿರಿಧಾನ್ಯ ಮೇಳ ಮತ್ತು ತೋಟಗಾರಿಕೆ ಬೆಳೆಗಳ ವಿಚಾರಸಂಕಿರಣ ಉದ್ಘಾಟಸಿ ಅವರು ಮಾತನಾಡಿದರು.
2016 ರಲ್ಲಿ ಕೃಷಿ ಸಂಶೋಧನಾ ಕೇಂದ್ರ ಶತಮಾನೋತ್ಸವ ಆಚರಸಬೇಕಿತ್ತು. ಈಗ ಸಂಶೋಧನಾ ಕೇಂದ್ರಕ್ಕೆ 107 ವರ್ಷ ತುಂಬಿದೆ. ಕಾರಣಾಂತರಗಳಿಂದ ಈಗ ಆಚರಿಸಲಾಗುತ್ತದೆ. ರೈತರ ಪರವಾಗಿ ಸಂಶೋಧನಾ ಕೇಂದ್ರ ಹೆಚ್ಚು ಬೆಳೆಯಲಿ. ದೇಶದ ಅಭಿವೃದ್ಧಿ ಅವಲೋಕಿಸಲು ಆ ದೇಶದಲ್ಲಿನ ವಿಶ್ವ ವಿದ್ಯಾಲಯ ಹಾಗೂ ಸಂಶೋಧನ ಕೇಂದ್ರಗಳು ಅಳೆತೆಗೋಲುಗಳಾಗಿವೆ. ಇಲ್ಲಿ ಸಂಶೋಧನೆಗಳು ಫಲಪ್ರದವಾದರೆ ದೇಶ ಅಭಿವೃದ್ಧಿ ಆಗುತ್ತದೆ ಎಂದರು.
ಬರಗಾಲ, ಅತಿವೃಷ್ಠಿ, ಬೆಳೆಗೆ ತಕ್ಕ ಬೆಲೆ ದೊರಕದೆ, ಹವಾಮಾನ ಬದಲಾವಣೆಗೆ ಹೊಸ ತಳಿ ಸಿಗದೆ, ಬೆಳೆಗಳನ್ನು ದಾಸ್ತಾನು ಮಾಡಲು ಗೋದಾಮುಗಳು ಇಲ್ಲದೆ, ಬೆಳೆಗಳನ್ನು ಸಂಸ್ಕರಣೆ ಮಾಡದೇ, ಮೌಲ್ಯವರ್ಧಿತ ಉತ್ಪನ್ನ ತಯಾರಿಸದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇವುಗಳಿಗೆ ಉತ್ತರವನ್ನು ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರಗಳು ಹುಡುಕಬೇಕು. ಇಲ್ಲಿನ ಸಂಶೋಧನೆಗಳು ರೈತರ ಭೂಮಿಯಲ್ಲಿ ಫಲಕಾಣಬೇಕು. ವಿಸ್ತರಣಾ ಚಟುವಟಿಕೆಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ಮೊದಲೇ ಬರ ಪೀಡಿತ ಜಿಲ್ಲೆ, ಬರಗಾಲ ಬಂದರೆ ಜಿಲ್ಲೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಬಬ್ಬೂರು ಕೇಂದ್ರದಲ್ಲಿ ಸಂಶೋಧನೆಗಳು ಹೆಚ್ಚು ಆಗಬೇಕು. ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು. ಜಗತ್ತೇ ಹವಾಮಾನ ಬದಲಾವಣೆಗೆ ತುತ್ತಾಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ನಿರೋಧಕ ಹಾಗೂ ಬರ ಸಹಿಷ್ಣುತೆ ಶಕ್ತಿ ಇರುವ ಹಾಗೂ ಕಡಿಮೆ ನೀರಿನಲ್ಲಿ ಬೆಳೆಯುವ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು. ರೈತರ ಸಂಕಷ್ಟ ಸ್ಪಂದನೆ ಮಾಡಬೇಕು. ಸಂಶೋಧನೆಗೆ ಸರ್ಕಾರ ಎಲ್ಲಾ ರೀತಿಯ ಅನುದಾನ ಹಾಗೂ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.