ಕೆನಡಾದಲ್ಲಿ ನಿಜ್ಜರ್ ಹತ್ಯೆಯಲ್ಲಿ ಅಮಿತ್ ಶಾ ಕೈವಾಡವಿದೆ : ‘ವಾಷಿಂಗ್ಟನ್ ಪೋಸ್ಟ್ʼ ವರದಿ

ಹೊಸದಿಲ್ಲಿ: ಕೆನಡಾದಲ್ಲಿ ನಡೆದಿದ್ದ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ನಿಗೂಢ ಹತ್ಯೆ ಪ್ರಕರಣದಲ್ಲಿ ಈಗ ಅನುಮಾನದ ಕಣ್ಣು ಭಾರತದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಡೆ ತಿರುಗಿದೆ. ಕೆನಡಾ ಅಧಿಕಾರಿಗಳ ಆರೋಪಗಳನ್ನು ಉಲ್ಲೇಖಿಸಿ ಮಾಡಿರುವ ವಿಶೇಷ ವರದಿಯಲ್ಲಿ ʼವಾಷಿಂಗ್ಟನ್ ಪೋಸ್ಟ್ʼ ಈ ಪ್ರಕರಣದಲ್ಲಿ ಅಮಿತ್ ಶಾ ಕೈವಾಡ ಇದೆ ಎಂದು ಹೇಳಿದೆ. ಹೌದು ಅಮಿತ್ ಶಾ ಮತ್ತು ಭಾರತದ ವಿದೇಶಿ ಗುಪ್ತಚರ ಸಂಸ್ಥೆ RAW ದ ಹಿರಿಯ ಅಧಿಕಾರಿಗಳು ನಿಜ್ಜರ್ ಹತ್ಯೆಗೆ ಅನುಮತಿ ನೀಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ನಿಜ್ಜ‌ರ್ ಹತ್ಯೆ ಕುರಿತ ದಾಖಲೆ ಹಂಚಿಕೊಳ್ಳುವ ಸಲುವಾಗಿ ಕೆನಡಾದ ವಿದೇಶಾಂಗ ಇಲಾಖೆ ಅಧಿಕಾರಿಗಳು ಅ.12ರಂದು ಸಿಂಗಾಪುರದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ರಹಸ್ಯವಾಗಿ ಭೇಟಿ ಮಾಡಿದ್ದರು. ಈ ಭೇಟಿ ವೇಳೆ, ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತ ದಾಖಲೆ ಹಸ್ತಾಂತರ ಮಾಡಿದ್ದಾರೆ. ಅದರಲ್ಲಿ ಭಾರತದ ಬಿಷ್ಟೋಯಿ ತಂಡವನ್ನು ಬಳಸಿ ಕಾರ್ಯಾಚರಣೆ ನಡೆಸಿದ ಕುರಿತ ಮಾಹಿತಿ ಇದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ದಾಖಲೆಗಳನ್ನು ಉಲ್ಲೇಖಿಸಿ ಮೊದಲಿಗೆ ವರದಿ ಪ್ರಕಟಿಸಿದ್ದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ, ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಗಳ ಕುರಿತ ಮಾಹಿತಿ ಸಂಗ್ರಹ ಮತ್ತು ಅವರ ಮೇಲಿನ ದಾಳಿಗೆ ಭಾರತದ ಹಿರಿಯ ಸಚಿವರು ಮತ್ತು ‘ರಾ’ದ ಹಿರಿಯ ಅಧಿಕಾರಿಗಳು ಅನುಮತಿ ನೀಡಿದ್ದರು ಎಂದು ಹೇಳಿತ್ತು. ಆದರೆ ತನ್ನ ಪರಿಷ್ಕೃತ ವರದಿಯಲ್ಲಿ ಪತ್ರಿಕೆಯು, ಆ ಹಿರಿಯ ಸಚಿವ ಅಮಿತ್ ಶಾ ಎಂದು ಹೆಸರಿಸಿದೆ. ಈ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಭಾರತ ಹೇಳಿತ್ತು. ಇದು ಎರಡೂ ದೇಶಗಳ ರಾಜತಾಂತ್ರಿಕ ಯುದ್ಧಕ್ಕೆ ನಾಂದಿ ಹಾಡಿತ್ತು. ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಕೆನಡಾ ವಿದೇಶಾಂಗ ಸಚಿವೆ ಮೆಲಾನೀ ಜಾಲಿ ಅವರಿಗೆ ಪತ್ರಕರ್ತರು ‘ಭಾರತದ ವಿರುದ್ಧ ನಿರ್ಬಂಧ ಹೇರುತ್ತೀರಾ? ಎಂದು ಪ್ರಶ್ನೆ ಕೇಳಿದಾಗ, ಎಲ್ಲ ಸಾಧ್ಯಾಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ. ಇದೇ ವೇಳೆ, ‘ಭಾರತದಿಂದ ನಾವು ನಿಜ್ಜರ್ ಹತ್ಯೆಯ ತನಿಖೆಗೆ ಸಹಕಾರ ಬಯಸುತ್ತೇವೆ. ಕೆನಡಾ ಪೊಲೀಸರ ವರದಿ ಆಧರಿಸಿ 6 ಭಾರತೀಯ ರಾಯಭಾರಿಗಳನ್ನು ಉಚ್ಚಾಟಿಸಿದ್ದೇವೆ. ಅವರ ವಿಚಾರಣೆಗೆ ನಾವು ನಿರ್ಧರಿಸಿದ್ದೆವು. ಆದರೆ ರಾಜತಾಂತ್ರಿಕ ರಕ್ಷಣೆ ನೆಪವೊಡ್ಡಿ ಭಾರತ ತನಿಖೆಯಿಂದ ಜಾರಿ ಕೊಂಡಿತು’ ಎಂದರು. ‘ಕೆನಡಾಗೆ ಪ್ರತಿ ವರ್ಷ ಸಾವಿರಾರು ಭಾರತೀಯರು ಬರುತ್ತಾರೆ. ನಮ್ಮವರು ಭಾರತಕ್ಕೂ ಹೋಗುತ್ತಾರೆ. ರಾಜತಾಂತ್ರಿಕ ಬಿಕ್ಕಟ್ಟು ಜನರ ಮೇಲೆ ಪರಿಣಾಮ ಆಗಬಾರದು. ಹೀಗಾಗಿ ಭಾರತವು ತನಿಖೆಗೆ ಸಹಕರಿಸಬೇಕು’ ಎಂದು ಜಾಲಿ ಆಗ್ರಹಿಸಿದರು. ಈ ವಿಷಯ ಈಗಾಗಲೇ ಉಭಯ ದೇಶಗಳು ಪರಸ್ಪರರ ರಾಜತಾಂತ್ರಿಕರ ಉಚ್ಚಾಟನೆಗೆ ಕಾರಣವಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement