ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕರಾಗಿರುವ ವಿಧಾನಪರಿಷತ್ ಸದಸ್ಯ, ಬಿ.ಕೆ ಹರಿಪ್ರಸಾದ್‌ಗೆ ಸಿಎಂ ಶಾಕ್ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಕಾಂಗ್ರೆಸ್‌ಗೆ ಪುನರ್ ರಚನೆಗೆ ವರಿಷ್ಠರು ಮುಂದಾಗಿದ್ದು, ಕೆಪಿಸಿಸಿಗೆ ನೂತನ ಕಾರ್ಯಾಧ್ಯಕ್ಷರು ಸೇರಿದಂತೆ ಹೊಸದಾಗಿ ಪದಾಧಿಕಾರಿಗಳನ್ನು ನೇಮಕ ಮಾಡಲು ಮುಂದಾಗಿದ್ದಾರೆ.
ಈ ನಡುವೆ ಕಾರ್ಯಾಧ್ಯಕ್ಷ ಸ್ಥಾನಕ್ಕೆ ವಿನಯ್ ಕುಮಾರ್ ಸೊರಕೆಯನ್ನು ಆಯ್ಕೆ ಮಾಡಿ ಹರಿಪ್ರಸಾದ್ ಅವರ ಮಹತ್ವ ಕಡಿಮೆ ಮಾಡಲು ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ. ಸೊರಕೆ ಬಿಲ್ಲವ ಸಮಾಜದವರಾಗಿದ್ದು, ಕರಾವಳಿಯವರಾಗಿದ್ದಾರೆ. ದೆಹಲಿ ಮಟ್ಟದಲ್ಲೂ ಸೊರಕೆ ಉತ್ತಮ ಸಂಪರ್ಕವನ್ನು ಹೊಂದಿರುವುದರಿಂದ ಹರಿಪ್ರಸಾದ್ ಅವರಿಗೆ ಇದು ಹಿನ್ನಡೆಯಾಗಲಿದೆ ಅನ್ನುವುದು ಸಿದ್ದು ಟೀಂ ಲೆಕ್ಕಾಚಾರವಾಗಿದೆ.
ಪ್ರಸ್ತುತ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ರಾಮಲಿಂಗಾ ರೆಡ್ಡಿ ಅವರು ಈಗಾಗಲೇ ಸಚಿವ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕಾರ್ಯಾಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಿ ಮಂತ್ರಿ ಸ್ಥಾನದ ಸಮರ್ಥ ನಿರ್ವಹಣೆಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ.
ವಿವಿಧ ಜಾತಿ, ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಧ್ಯಕ್ಷ ಸ್ಥಾನಕ್ಕೆ ವಿನಯ್ ಕುಲಕರ್ಣಿ, ಅಂಜಲಿ ನಿಂಬಾಳ್ಕರ್, ಜೆ.ಸಿ. ಚಂದ್ರಶೇಖರ್, ವಿನಯ್ ಕುಮಾರ್ ಸೊರಕೆ, ವಸಂತಕುಮಾರ್ ನೇಮಕ ಮಾಡುವ ಸಾಧ್ಯತೆಗಳು ಹೆಚ್ಚಿದ್ದು , ಈ ಲೆಕ್ಕಚಾರದ ನಡುವೆ ಸಿದ್ದು ಟೀಂ ತಮ್ಮ ತಂತ್ರ ಹೂಡುತ್ತಿದ್ದಾರೆ.