ಯಾದಗಿರಿ: ಕೇಂದ್ರದಲ್ಲಿ ಬಹಳ ಕೆಟ್ಟ ಸರ್ಕಾರ ಅಧಿಕಾರದಲ್ಲಿದೆ. ಈ ಸರ್ಕಾರ ಸುಳ್ಳು ಹೇಳುತ್ತಾ, ದ್ವೇಷ ಕಾರುತ್ತಿದೆ. ನಾವೆಲ್ಲರೂ ಒಟ್ಟಾಗಿ ಈ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಯಾದಗಿರಿ ಜಿಲ್ಲೆ ಬ್ಲಾಕ್ ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿಮಾತನಾಡಿದ ಅವರು,ಮುಂಬರುವ ಚುನಾವಣೆ ಸಮಯದಲ್ಲಿ ನೀವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. ನಮ್ಮ ಸರ್ಕಾರ ಬಂದರೆ ನಾನು ನಮ್ಮ ನಾಯಕರ ಕೈ ಹಿಡಿದು ಕೆಲಸ ಆಗುವಂತೆ ಮಾಡುತ್ತೇನೆ. ನನ್ನ ಉಸಿರಿರುವವರೆಗೂ ನಿಮ್ಮ ಪರವಾಗಿ, ರಾಜ್ಯ ಹಾಗೂ ದೇಶದ ಪರವಾಗಿ, ಕಾಂಗ್ರೆಸ್ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ
ಇಂದು ದೇಶವೇ ಮಾತನಾಡುತ್ತಿರುವ ಉದ್ಯಮಿ ಬಳಿ 2014ರಲ್ಲಿ ಕೇವಲ 3000 ಕೋಟಿ ಸಂಪತ್ತು ಇತ್ತು. 2019ರಿಂದ 2023ರವರೆಗೆ 12 ಲಕ್ಷ ಕೋಟಿ ಸಂಪತ್ತು ಹೆಚ್ಚಾಗಿದೆ. ಇಷ್ಟೊಂದು ಸಂಪತ್ತು ಹೇಗೆ ಹೆಚ್ಚಾಗಲು ಸಾಧ್ಯ? ಬ್ಯಾಂಕ್, ಎಲ್ಐಸಿಯಲ್ಲಿರುವ ನಮ್ಮ ಹಣವನನ್ನು ಸಾಲವಾಗಿ ಪಡೆದು, ನಮ್ಮದೇ ಆಸ್ತಿಗಳಾದ ಬಂದರು, ರೈಲ್ವೇ, ವಿಮಾನ ನಿಲ್ದಾಣಗಳನ್ನು ಖರೀದಿ ಮಾಡಿದ್ದಾರೆ. ಇದರ ಬಗ್ಗೆ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಅವರ ವಿರುದ್ಧ ವೈಯಕ್ತಿಕವಾಗಿ ದ್ವೇಷದಿಂದ ಹೋರಾಟ ಮಾಡುತ್ತಿಲ್ಲ.
ಮೋದಿ ಅವರು ಅವರಿಗಾಗಿ ಕಾನೂನು ಬದಲಿಸುತ್ತಾ ಹೋದರು. ಬೇರೆಯವರಿಗೆ ಸಿಗದ ಸಂಪತ್ತು ಅವರಿಗೆ ಮಾತ್ರ ಸಿಗುತ್ತದೆ. ಮೋದಿ ಅವರು ವಿದೇಶ ಪ್ರವಾಸ ಹೋದರೆ ಅವರ ಜತೆ ಆತನೂ ಯಾಕೆ ಹೋಗುತ್ತಾನೆ? ಮೋದಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆತನ ವಿಶೇಷ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ಇದರ ಬಗ್ಗೆ ಉತ್ತರ ಕೊಡಿ ಎಂದರೆ ಅದನ್ನು ನೀಡಲು ಸಿದ್ಧರಿಲ್ಲ. ಈ ವಿಚಾರವಾಗಿ ನಾವು ಮಾತನಾಡಿದರೆ ಅಧಿವೇಶನ ಮುಂದೂಡುತ್ತಿದ್ದರು. ಸರ್ಕಾರದ ಸಂಸದರೆ ಗಲಾಟೆ ಮಾಡಿದ್ದಾರೆ. ಕಲಾಪ ಮುಂದೂಡಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವವನ್ನು ಬಹಳ ಕೆಳ ಮಟ್ಟಕ್ಕೆ ತಂದಿದ್ದಾರೆ. ನಾನು 1 ಗಂಟೆ ಭಾಷಣ ಮಾಡಿದಾಗ ನನ್ನ ಅರ್ಧ ಭಾಷಣ ದಾಖಲೆಗಳಿಂದ ತೆಗೆದುಹಾಕಿದ್ದಾರೆ. ಇದು ದೇಶವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದರಲ್ಲಿ 15 ಲಕ್ಷ ಹುದ್ದೆಗಳು ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗದವರಿಗೆ ಸಿಗಲಿದೆ. ಈ ಹುದ್ದೆಗಳನ್ನು ಯಾಕೆ ತುಂಬುತ್ತಿಲ್ಲ. ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇದ್ದರೆ ಈ ಹುದ್ದೆಗಳ ಭರ್ತಿ ಮಾಡಿ. ಇದೆಲ್ಲದರ ಬಗ್ಗೆ ನಾವು ಮಾತನಾಡಿದರೆ ಅವರಿಗೆ ಮುಳ್ಳಿನಂತೆ ತಾಗುತ್ತಿವೆ.