ಕೇಂದ್ರದ 2024-25ರ ಬಜೆಟ್ ವಿರುದ್ಧ ಇಂಡಿಯಾ ನಾಯಕರ ಧರಣಿ

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿರುವ 2024-25ರ ಬಜೆಟ್‌ನಲ್ಲಿ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ತಾರತಮ್ಯ ಮಾಡಿದೆ ಎಂದು ಇಂಡಿಯಾ ಒಕ್ಕೂಟ ಆರೋಪಿಸಿದ್ದು, ಸಂಸತ್ತಿನ ಎದುರು ಇಂದು ಧರಣಿ ನಡೆಸಿದರು.

ಇಂಡಿಯಾ ಒಕ್ಕೂಟದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಟಿಎಂಸಿ, ಸಮಾಜವಾದಿ ಪಕ್ಷದ ನಾಯಕರು, ಡಿಎಂಕೆ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನಕಾರರು ‘ನಮಗೆ ಭಾರತ ಬಜೆಟ್ ಬೇಕು ಎನ್‌ಡಿಎ ಬಜೆಟ್ ಅಲ್ಲ’, ‘ಎನ್‌ಡಿಎಯಿಂದ ಬಜೆಟ್‌ನಲ್ಲಿ ಭಾರತಕ್ಕೆ ದ್ರೋಹ’ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ‘ಈ ಬಜೆಟ್ ಜನ ವಿರೋಧಿಯಾಗಿದೆ, ಇದರಿಂದ ಯಾರಿಗೂ ನ್ಯಾಯ ದೊರೆತಿಲ್ಲ. ವಿಶೇಷ ಪ್ಯಾಕೇಜ್ ಬಗ್ಗೆ ಹೇಳಿದರೇ ಹೊರತು, ರಾಜ್ಯಗಳಿಗೆ ನೀಡುವ ವಿಶೇಷ ಸ್ಥಾನಮಾನದ ಬಗ್ಗೆ ಉಲ್ಲೇಖಿಸಲೇ ಇಲ್ಲ. ಇದೊಂದು ವಂಚನೆಯ ಬಜೆಟ್ ಆಗಿದ್ದು, ಜನರಿಗೆ ಅನ್ಯಾಯವಾಗಿದೆ’ ಎಂದು ಕಿಡಿಕಾರಿದ್ದಾರೆ.

Advertisement

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮಾತನಾಡಿ, ಒಕ್ಕೂಟ ಸರ್ಕಾರವನ್ನು ಉಳಿಸಿಕೊಳ್ಳಲು ಕೇಂದ್ರ ಬಜೆಟ್ ಮೂಲಕ ಎಲ್ಲಾ ತತ್ವಗಳನ್ನು ಉಲ್ಲಂಘಿಸಿದೆ. ಸರ್ಕಾರವನ್ನು ರಕ್ಷಿಸಿಕೊಳ್ಳುವುದು ಬಜೆಟ್‌ನ ಉದ್ದೇಶವಾಗಿತ್ತು. ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಅನುದಾನ ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ಇತರ ರಾಜ್ಯಗಳಿಗೂ ನ್ಯಾಯ ಸಿಗಬೇಕು. ಅದಕ್ಕಾಗಿಯೇ ನಾವು ಈ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement