ಬೆಂಗಳೂರು: ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಜನತೆಗೆ ಚೊಂಬು ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ಆಯ್ಕೆಯಾಗಿರುವ ಹೊರತಾಗಿಯೂ ತಮ್ಮ ರಾಜ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ನಿರ್ಮಲಾ ಸೀತಾರಾಮನ್ ಬೆಂಗಳೂರಿನವರಾಗಿದ್ದು, ಕರ್ನಾಟಕಕ್ಕೆ ಏನನ್ನೂ ಕೊಟ್ಟಿಲ್ಲ. ತಮ್ಮ ಸರ್ಕಾರವನ್ನು ಉಳಿಸುವ ಉದ್ದೇಶದಿಂದ ಅವರು ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಭರಪೂರ ಅನುದಾನ ಕೊಟ್ಟಿದ್ದಾರೆ. ಅವರು ತಮ್ಮ ಮೈತ್ರಿಯ ಬಗ್ಗೆ ಮಾತ್ರ ಕಾಳಜಿ ವಹಿಸಿದ್ದಾರೆ. ಹೀಗಾಗಿ ಇಂಡಿಯಾ ಒಕ್ಕೂಟ ಇರುವ ರಾಜ್ಯಗಳಿಗೆ ಅನ್ಯವಾಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್, ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ಜನರ ಬಗ್ಗೆ ತಾರತಮ್ಯ ಮಾಡುತ್ತಿದೆ ಎಂದು ಹೇಳಿದೆ. ಈ ಬಜೆಟ್ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ‘ಕುರ್ಚಿ ಉಳಿಸಿಕೊಳ್ಳಲು ಕಸರತ್ತು’ ಎಂದು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಆರೋಪಿಸಿವೆ.
ಬಜೆಟ್ ಕುರಿತು ಹೇಳಿಕೆ ನೀಡಿರುವ ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಅವರು, ಬಿಹಾರಕ್ಕೆ ನೆರವು ಅಗತ್ಯವಿತ್ತು. ಅದಕ್ಕೆ ಬೇಡಿಕೆಯೂ ಇತ್ತು. ಆಂಧ್ರಪ್ರದೇಶಕ್ಕೂ ನೀಡಿರುವುದು ಸರಿಯಾಗಿದೆ. ಆದರೆ ತೆಲಂಗಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳಕ್ಕೆ ನೀವು ಏನು ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.