ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಗುರುವಾರ (ಫೆಬ್ರವರಿ 1) ಸಂಸತ್ನಲ್ಲಿ ಮಧ್ಯಂತರ ಮುಂಗಡಪತ್ರ ಮಂಡನೆ ಮಾಡಲಿದ್ದಾರೆ. ಹಣಕಾಸು ಸಚಿವರಾಗಿ ಸೀತಾರಾಮನ್ ಮಂಡಿಸಲಿರುವ 6ನೇ ಬಜೆಟ್ ಇದಾಗಿದೆ. ಮೊದಲ ಮಧ್ಯಂತರ ಬಜೆಟ್ ಕೂಡ ಅವರದ್ದಾಗಿದೆ. ಅಲ್ಲದೇ ಪ್ರಧಾನಿ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಕೂಡ ಆಗಲಿದೆ. ಬೆಳಗ್ಗೆ 11 ಗಂಟೆಗೆ ಅವರ ಬಜೆಟ್ ಭಾಷಣ ಶುರುವಾಗಲಿದೆ. ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಭಾಷಣ ಮುಂದುವರಿಯಬಹುದು. ಎನ್ಡಿಎ-2 ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ಲೋಕಸಭೆ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ ಮಧ್ಯಂತರ ಬಜೆಟ್ ಮಧ್ಯಂತರ ಅವಧಿಯ ಹಣಕಾಸಿನ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಹೊಸ ಸರ್ಕಾರದಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು. ಚುನಾವಣೆಗೆ ಮುಂಚಿನ ಬಜೆಟ್ ಇದಾದ್ದರಿಂದ ಸಾಕಷ್ಟು ಕುತೂಹಲವೂ ಇದೆ. ಆದರೆ, ಚುನಾವಣೆ ಬಳಿಕ ಮತ್ತೆ ಪೂರ್ಣ ಬಜೆಟ್ ಮಂಡನೆ ಆಗುವುದರಿಂದ ಈ ಮಧ್ಯಂತರ ಬಜೆಟ್ಗೆ ಹೆಚ್ಚಿನ ಮಹತ್ವ ಇರುವುದಿಲ್ಲ. ಆದರೂ ಕೂಡ ಸರ್ಕಾರದ ಮುಂದಿನ ದಾರಿ ಬಗ್ಗೆ ಇರುವ ದೃಷ್ಟಿಕೋನ ಈ ಬಜೆಟ್ನಿಂದ ತಿಳಿಯಬಹುದು.